ಅಪರಾಧಿ ನಾನಲ್ಲ; ಗಣಿ ಅಪರಾಧ ಎನಗಿಲ್ಲ: ಎಸ್ಎಂ ಕೃಷ್ಣ

ತಾನು ಯಾವುದೇ ಗಣಿಗಾರಿಕಾ ಹಗರಣದಲ್ಲಿ ಭಾಗಿಯಾಗಿಲ್ಲವೆಂದು ರಾಜ್ಯದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಿದ್ದರೂ ತನ್ನ ವಿರುದ್ಧ ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ದೂರು ದಾಖಲಿಸಲಾಗಿದೆ ಮತ್ತು ಅವರು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಭಾನುವಾರ ಇಲ್ಲಿ ಹೇಳಿದರು.
ತಾನು ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿಲ್ಲ. ಆದರೆ ಸಂಪುಟದ ಒಪ್ಪಿಗೆ ಹಾಗೂ ಗಜೆಟ್ ಅಧಿಸೂಚನೆಯೊಂದರ ಬಳಿಕ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಈ ಎಲ್ಲ ನಿರ್ಧಾರಗಳು ರಾಜ್ಯಕ್ಕೆ ಸಂಬಂಧಪಟ್ಟ ನೀತಿ ವಿಚಾರಗಳಾಗಿದ್ದವು ಮತ್ತು ತಾನು ಯಾರೊಬ್ಬನಿಗೂ ಯಾವುದೇ ವಿಶೇಷ ಒಲವು ತೋರಿಸಲಿಲ್ಲ. ಎಲ್ಲ ಪ್ರಶ್ನೆಗಳಿಗೆ ಸಂಬಂಧಿಸಿ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಗುತ್ತಿಗೆ ನೀಡಿದ್ದು ಗಣಿ ಸಚಿವರು; 'ಮುಖ್ಯಮಂತ್ರಿ ಕೃಷ್ಣ' ಅಲ್ಲ!: ಕೃಷ್ಣ ಅವರು 1999ರಿಂದ 2004ರ ತನಕ ಮುಖ್ಯಮಂತ್ರಿಯಾಗಿದ್ದ ವೇಳೆ ಹಳೆ ದರಗಳಲ್ಲಿ ಗಣಿಗಾರಿಕೆ ಲೀಸ್ ಮಂಜೂರು ಮಾಡಿದ್ದರಷ್ಟೇ ಅಲ್ಲ, ಅರಣ್ಯ ಮತ್ತು ಪರಿಸರ ಇಲಾಖೆಯ ತೀವ್ರ ವಿರೋಧವನ್ನು ಲೆಕ್ಕಿಸದೆ ಮೀಸಲು ಅರಣ್ಯ ಭೂಮಿಯನ್ನು ಗುತ್ತಿಗೆಗೆ ನೀಡಿದ್ದರು ಎಂದು ಆಪಾದಿಸಿ ದೂರು ಸಲ್ಲಿಸಲಾಗಿದೆ.
2003ರ ಮಾ. 15ರಂದು ನೀಡಲಾದ ಗಜೆಟ್ ಪ್ರಕಟನೆಯಲ್ಲಿ ಗಣಿಗಾರಿಕೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು ಮತ್ತು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಬೇಕಾದಲ್ಲಿ ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಸಂಪುಟ ಅಂಗೀಕಾರದ ಬಳಿಕ ಗಜೆಟ್ ಪ್ರಕಟನೆ ಹೊರಡಿಸಲಾಗಿತ್ತು. ಅನಂತರ ಗಣಿಗಾರಿಕಾ ಸಚಿವರು ಅನುಮತಿ ನೀಡಿದ್ದರು ಎಂದು ಕೃಷ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications