ಸಿಬಿಐನಿಂದ ಶ್ರೀಲಕ್ಷ್ಮಿ ಬಂಧನ, ಕೃಷ್ಣನ ಜನ್ಮಸ್ಥಾನವೇ ಗಟ್ಟಿ

ಈ ಮಧ್ಯೆ ಅಕ್ರಮ ಗಣಿಗಾರಿಕೆ ಆರೋಪಿಗಳಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರಿಗೆ ಸೋಮವಾರ ಕೂಡಾ ಜಾಮೀನು ನೀಡಲು ಸಿಬಿಐ ಕೋರ್ಟ್ ನಿರಾಕರಿಸಿ, ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
1988 ರ ಬ್ಯಾಚ್ ನ ಐಎಎಸ್ ಅಧಿಕಾರಿ, ಡಿಸ್ಟಿಂಕ್ಷನ್ ವಿದ್ಯಾರ್ಥಿಯಾಗಿದ್ದ ಶ್ರೀಲಕ್ಷ್ಮಿ ಅಧಿಕಾರದಲ್ಲಿರುವಾಗಲೇ ಬಂಧನಗೊಂಡ ಮೊದಲ ಅಧಿಕಾರಿ ಎನಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಶ್ರೀಲಕ್ಷ್ಮಿ ಅವರನ್ನು ಸಹ ಆರೋಪಿಯನ್ನಾಗಿ ಮಾಡಲಾಗಿದೆ.
ಗಾಲಿ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಸಂಸ್ಥೆಗೆ ಲೈಸನ್ಸ್ ನೀಡಿದ ಸಂದರ್ಭದಲ್ಲಿ ಶ್ರೀಲಕ್ಷ್ಮಿ ಅವರು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಉಳಿದ ಆರೋಪಿಗಳಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ಅಲ್ಲದೆ ವಿಡಿ ರಾಜಗೋಪಾಲ್ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.
ಲಕ್ಷ್ಮಿ ಯತ್ನ ವಿಫಲ : ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅಧಿಕಾರ ಅವಧಿಯ ಪ್ರಬಲ ಅಧಿಕಾರಿ ಲಕ್ಷ್ಮಿಗೆ ಬಂಧನದ ಸುಳಿವು ಸಿಕ್ಕ ನಂತರ ಬಂಧನ ತಪ್ಪಿಸಿಕೊಳ್ಳಲು ಕೇಂದ್ರದಲ್ಲಿ ಭಾರಿ ಲಾಬಿ ನಡೆಸಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಮೇಲೆ ಎಲ್ಲಾ ತಪ್ಪನ್ನು ಲಕ್ಷ್ಮಿ ಹೊರೆಸಿದ್ದಾರೆ.
ನನ್ನನ್ನು ಬಂಧಿಸಬೇಡಿ ನನಗೆ ಮೈ ಹುಷಾರಿಲ್ಲ ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರ ಮುಂದೆ ಲಕ್ಷ್ಮಿ ಕಣ್ಣೀರಿಟ್ಟಿದ್ದರು ಎನ್ನಲಾಗಿದೆ. ಕೊನೆ ಪ್ರಯತ್ನ ಎಂಬಂತೆ ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದ ಲಕ್ಷ್ಮಿಗೆ ನಿರಾಶೆಯಾಗಿದೆ.
ಲಕ್ಷ್ಮಿಯನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆಯಿದ್ದು, ರೆಡ್ಡಿಗಳಿಗೆ ಚಂಚಲಗುಡ ಜೈಲಿನಿಂದ ಸದ್ಯಕ್ಕಂತೂ ಮುಕ್ತಿಯಿಲ್ಲ.












Click it and Unblock the Notifications