ಬಾಳಾ ಠಾಕ್ರೆಗೆ ರೇಷ್ಮೆ ಶಾಲು ಬಿಚ್ಚಿ ಬಾರಿಸಿದ ಕನ್ನಡಿಗರು

ಮರಾಠಿಗರು ಹುಟ್ಟಿದ್ದೇ ಗಡಿಭಾಗದಲ್ಲಿ ದಂಗೆಯೆಬ್ಬಿಸಲು ಎಂದು ಹೇಳಿದ ಕಂಬಾರರ ಸೊಂಟ ಮುರಿಯಬೇಕು. ಮಹಾರಾಷ್ಟ್ರದಲ್ಲೂ ಅನೇಕ ಕನ್ನಡಿಗರಿದ್ದಾರೆ. ಅವರನ್ನು ವಾಪಸ್ ಕಳುಹಿಸಿದರೆ ಹೇಗಿರುತ್ತದೆ ಎಂದು ಬಾಳಾ ಠಾಕ್ರೆ ತಮ್ಮ ಪತ್ರಿಕೆ ಸಾಮ್ನಾದಲ್ಲಿ ಕನ್ನಡಿಗರನ್ನು ಕೆಣಕಿದ್ದರು.
ಫೇಸ್ ಬುಕ್ ನಲ್ಲಿ, ಟ್ವಿಟ್ಟರುಗಳಲ್ಲಿ ಕನ್ನಡಿಗನನ್ನು ಅವಮಾನಿದ ಬಾಳಾ ಠಾಕ್ರೆಯನ್ನು ಕನ್ನಡಿಗರು ರೇಷ್ಮೆ ಶಾಲು ತೆಗೆದು ಬಾರಿಸಿದ್ದಾರೆ. ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿಎ ನಾರಾಯಣಗೌಡ ಮತ್ತು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರು ಠಾಕ್ರೆಯನ್ನು ತರಾಟೆಗೆ ತೆಗೆದಕೊಂಡಿದ್ದಾರೆ.
ಸಾಮ್ನಾ ಪತ್ರಿಕೆಗೆ ಬೆಂಕಿ : ಬೆಳಗಾವಿಯಲ್ಲಿ ಸಾಮ್ನಾ ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಕನ್ನಡ ರಕ್ಷಣಾ ವೇದಿಕೆ ಮತ್ತಿತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕನ್ನಡದ ಕಟ್ಟಾಳುಗಳು ಠಾಕ್ರೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು, ಠಾಕ್ರೆಯನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಠಾಕ್ರೆ ಒಬ್ಬ ಹುಚ್ಚ : ಬಾಳಾ ಠಾಕ್ರೆ ಒಬ್ಬ ಮುದಿ ಸಿಂಹ. ಆತನ ತಲೆ ಕೆಟ್ಟಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಇಂಥ ಬೆದರಿಕೆಗೆ ಕನ್ನಡಿಗರು ಬೆದರುವುದಿಲ್ಲ. ಉದ್ಧಟತನದ ಮಾತು ಆಡುತ್ತಿರುವ ಶಿವಸೇನೆಗೆ ಕನ್ನಡ ರಕ್ಷಣಾ ವೇದಿಕೆ ತಕ್ಕ ಉತ್ತರ ನೀಡುತ್ತದೆ ಎಂದು ನಾರಾಯಣ ಗೌಡ ಪ್ರತ್ಯುತ್ತರ ನೀಡಿದ್ದಾರೆ.
ಪುಟ್ಟಪ್ಪ ಮಾತಿನ ಕಿಡಿ : ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ವಿರೋಧ ವ್ಯಕ್ತಪಡಿಸಿದ್ದ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರು, ಬಾಳಾ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಮಾತಾಡಿ ಆತ ತಾನು ಕಾಡಿನ ಮನುಷ್ಯ ಎಂದು ಸಾಬೀತುಮಾಡಿದ್ದಾನೆ. ಹತ್ತು ಜನ್ಮ ಕಳೆದರೂ ಬೆಳಗಾವಿ ಮಹಾರಾಷ್ಟ್ರದ ಪಾಲಾಗುವುದಿಲ್ಲ. ಠಾಕ್ರೆ ಇಂತಹ ಕಿತಾಪತಿ ಮಾಡುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.











Click it and Unblock the Notifications