ಶ್ರೀರಾಮುಲು ಜೊತೆ ಹೋದವರಿಗೆ ತಕ್ಕ ಶಾಸ್ತಿ : ಡಿವಿಎಸ್

ಬಿಜೆಪಿಯನ್ನು ತ್ಯಜಿಸಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿರುವ ಶ್ರೀರಾಮುಲು ಅವರನ್ನು ಯಾವುದೇ ಕಾರಣಕ್ಕೆ ಬಿಜೆಪಿಗೆ ಸೇರಿಸುವುದಿಲ್ಲ. ಬಿಜೆಪಿಯಿಂದಲೇ ಅವರಿಗೆ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ಎಂದು ಅವರು ಶನಿವಾರ ಮಂಗಳೂರಿನಲ್ಲಿ ತಿಳಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಬಂದ ಕೂಡಲೆ ಶ್ರೀರಾಮುಲು ಮತ್ತು ಕಳಂಕಿತ ರೆಡ್ಡಿ ಸಹೋದರರನ್ನು ಸಂಪುಟದಿಂದ ದೂರವಿಡಲಾಗಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ಜಿ. ಜನಾರ್ದನ ರೆಡ್ಡಿ ಜೈಲು ಸೇರಿದ ಮೇಲೆ ರೆಡ್ಡಿಗಳ ಅಣತಿಯಂತೆ ಪಕ್ಷ ತೊರೆದು ಪಕ್ಷೇತರರಾಗಿ ಸ್ಪರ್ಧಿಸಲು ಶ್ರೀರಾಮುಲು ತೀರ್ಮಾನಿಸಿದರು.
ಶ್ರೀರಾಮುಲು ಪರ ಪ್ರಚಾರ ಮಾಡುತ್ತಿರುವ ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತಿತರನ್ನು ಓಲೈಸಲು ಯಾವುದೇ ಪ್ರಯತ್ನವನ್ನೂ ಬಿಜೆಪಿ ಮಾಡುವುದಿಲ್ಲ. ಅವರ ಪರ ಪ್ರಚಾರ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಸದಾನಂದ ಗೌಡ ನುಡಿದರು.
ಹಿರಿಯ ನಾಯಕರಾದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ತಾವು ಒಟ್ಟಿಗೆ ಕೆಲಸ ಮಾಡುತ್ತಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಖಂಡಿತ. ಗಾದಿ ಲಿಂಗಪ್ಪ ಅವರ ಜಯ ನಿಶ್ಚಿತ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications