ನ್ಯಾ ಹೆಗ್ಡೆಗೆ ಕೇಂದ್ರದಲ್ಲಿ ಮಹತ್ವ ಸ್ಥಾನದ ಆಮಿಷ: ಯಡಿಯೂರಪ್ಪ

'ಕೇಂದ್ರದಲ್ಲಿ ಮಹತ್ವದ ಅಧಿಕಾರ ಸಿಗುತ್ತದೆ ಎಂಬ ಆಸೆಯಿಂದ ನನ್ನನ್ನು ಜೈಲಿಗೆ ಕಳಿಸಿದ ಶ್ರೇಯಸ್ಸು ನಿಮಗೆ ಲಭಿಸುತ್ತದೆ. ಇಂತಹ ವರದಿ ನೀಡುವುದಕ್ಕೆ ಕಾರಣವಾದರೂ ಏನಿತ್ತು. ಇದರ ಹಿಂದಿನ ಪಿತೂರಿ ಯಾವುದು? ನಿಮಗೆ ಕೇಂದ್ರದಲ್ಲಿ ಯಾವ ಸ್ಥಾನದ ಾಪೇಕ್ಷೆಯಿತ್ತು ಎಂಬುದನ್ನು ಸ್ವತಃ ಹೆಗ್ಡೆಯವರೇ ಬಹಿರಂಗಪಡಿಸಬೇಕು ಎಂದು ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಕಠಿಣ ನಿರ್ಧಾರ ಕೈಗೊಂಡಿದ್ದರಿಂದಾಗಿ ಸಂತೋಷ್ ಹೆಗ್ಡೆ ಬಗ್ಗೆ ಅಪಾರ ಗೌರವ ಮೂಡಿತ್ತು. ಕೇವಲ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದ್ದ ನಿಮಗೆ ನಿಮ್ಮ ಕಚೇರಿಯಲ್ಲಿಯೇ ನಡೆಯುತ್ತಿದ್ದ ಭ್ರಷ್ಟಾಚಾರ ಕಾಣಲಿಲ್ಲವೇ? ತಮ್ಮ ಕಚೇರಿಯಲ್ಲಿಯೇ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆಯವರಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದ ಬಿ.ಎಸ್. ಯಡಿಯೂರಪ್ಪ, ಸಂತೋಷ ಹೆಗ್ಡೆಯವರು ಪ್ರಾಮಾಣಿಕರಾಗಿದ್ದರೆ ಆತ್ಮಾವಲೋಕನ ಮಾಡಿಕೊಂಡು ಸ್ಪಷ್ಟನೆಯನ್ನು ನೀಡಲಿ ಎಂದು ಒತ್ತಾಯಿಸಿದರು.
ಸಂತೋಷ್ ಹೆಗ್ಡೆ ಅವರಿಗೆ 2001 ರಿಂದ 2010ರವರೆಗಿನ ಗಣಿ ಅಕ್ರಮದ ಬಗ್ಗೆ ತನಿಖೆಯನ್ನು ನಡೆಸುವಂತೆ ಸೂಚಿಸಿದ್ದರೂ ಸಹ ಅವರು, ಎಸ್. ಎಂ. ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ ಅವರನ್ನು ಬಿಟ್ಟು ನನ್ನನ್ನು ಹಾಗೂ ರೆಡ್ಡಿ ಸಹೋದರರನ್ನು ಬಲಿಪಶು ಮಾಡಿದ್ದಾರೆ. ಇದರ ಹಿಂದಿನ ಮರ್ಮವೇನು ಎಂದು ಬಹಿರಂಗಪಡಿಸುವಂತೆ ಹೆಗ್ಡೆಯವರನ್ನು ಒತ್ತಾಯಿಸಿದರು.












Click it and Unblock the Notifications