ಕಿಂಗ್ ಫಿಷರ್ ತುರ್ತು ಭೂಸ್ಪರ್ಶ: ಸಾಯುವವರು ಸಾಯಲಿ ಬಿಡಿ

ದೇಶದ ಪ್ರತಿಷ್ಠಿತ, ಪಾರಂಪರಿಕ ಉದ್ಯಮ ಸಂಸ್ಥೆಗಳಲ್ಲೊಂದಾದ ಬಜಾಜ್ ಆಟೋ ಕಂಪನಿಯ ದಿಗ್ಗಜ ರಾಹುಲ್ ಬಜಾಜ್ ಅವರು ಬಿಲ್ ಕುಲ್ ಬೇಲ್‌ಔಟ್ ನೀಡಬಾರದು ಎಂದು ಎಚ್ಚರಿಸಿದ್ದಾರೆ.
ಸಾಲದ ಹೊರೆಯಿಂದ ತತ್ತರಿಸಿರುವ ಕಿಂಗ್‌ಫಿಶರ್ ಏರ್ ಲೈನ್ಸ್, ಸರಕಾರದ ತುರ್ತು ನೆರವನ್ನು ಯಾಚಿಸಿರುವ ಸಂದರ್ಭದಲ್ಲಿ ರಾಹುಲ್ ಬಜಾಜ್ ಅವರು, ಖಾಸಗಿ ಸಂಸ್ಥೆಗಳನ್ನು ಬದುಕಿಸಲು ಸರಕಾರವು ಅವುಗಳಿಗೆ ಪಾರುಗಾಣಿಕೆ (ಬೇಲ್‌ಔಟ್) ನೀಡುವುದನ್ನು ವಿರೋಧಿಸಿದ್ದಾರೆ.
ಕಿಂಗ್‌ಫಿಶರ್ ನ ಪ್ರಸಕ್ತ ದುಃಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಭಾರತ ಒಂದು ಮುಕ್ತ ಮಾರುಕಟ್ಟೆಯಾಗಿದ್ದು, 'ಸಾಯುವವರು ಸಾಯಲಿ ಬಿಡಿ" ಎಂದು ಖಾರವಾಗಿ ಹೇಳಿದ್ದಾರೆ. ಇದೊಂದು ರೀತಿ 'ದಿನಾ ಸಾಯೋರಿಗೆ ಅಳೋರು ಯಾರು!? ಎಂಬಂತಾಗಿದೆ.
ರಾಷ್ಟ್ರೀಯ ಸುದ್ದಿವಾಹಿನಿ ಜತೆ ಮಾತಾನಾಡಿದ ಅವರು 'ನಾನೊಬ್ಬ ಖಾಸಗಿ ರಂಗದ ಹೆಮ್ಮೆಯ ಉದ್ಯಮಿ. ಉದ್ಯೋಗಿಗಳು ಅಥವಾ ಗ್ರಾಹಕರ ಹಿತಕ್ಕಾಗಿ ಖಾಸಗಿ ವಲಯದ ಯಾವುದೇ ಕಂಪನಿಗೆ ಸರಕಾರವೇ ಪಾರುಗಾಣಿಕೆ ನೀಡುವುದರಲ್ಲಿ ಯಾವುದೇ ತರ್ಕ ಇಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ.
'ಒಂದು ವೇಳೆ ಬಜಾಜ್ ಆಟೋ ಸಂಸ್ಥೆಯು ಆರ್ಥಿಕ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡರೆ, ನೀವು ನನಗೆ ಪಾರುಗಾಣಿಕೆ ನೀಡುವಿರಾ?' ಎಂದೂ ಅವರು ಸರಕಾರಿ ಸವಾಲೆಸದ್ದಾರೆ. 'ಇದೊಂದು ಮುಕ್ತ ಮಾರುಕಟ್ಟೆಯಾಗಿದ್ದು, ಯಾರು ಸಾಯುತ್ತಿರುವರೋ ಅವರು ಸಾಯಲೇಬೇಕಾಗುತ್ತದೆ' ಎಂದಿದ್ದಾರೆ.
ಸಾಲದ ಹೊರೆಯಿಂದಾಗಿ ದಿವಾಳಿಯ ಅಂಚಿಗೆ ತಲುಪಿರುವ ಕಿಂಗ್‌ಫಿಶರ್ ಸಂಸ್ಥೆಯನ್ನು ಉಳಿಸಲು ಅದರ ಚೇರ್ ಮನ್ ವಿಜಯ್‌ಮಲ್ಯ ಸರಕಾರದ ನೆರವು ಕೋರುತ್ತಿರುವ ಹಿನ್ನೆಲೆಯಲ್ಲಿ ಬಜಾಜ್ ಹೀಗೆ ಅಭಿಪ್ರಾಯಿಸಿದ್ದಾರೆ.
ಏತನ್ಮಧ್ಯೆ ಕಿಂಗ್‌ಫಿಶರ್ ಸಂಸ್ಥೆಗೆ ಆರ್ಥಿಕ ನೆರವು ನೀಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ನಾಗರಿಕ ವಾಯುಯಾನ ಸಚಿವ ವಯಲಾರ್ ರವಿ ಸ್ಪಷ್ಟಪಡಿದ್ದಾರೆ.
2010-11ರ ಸಾಲಿನಲ್ಲಿ ಕಿಂಗ್‌ಫಿಶರ್ ಏರ್ ಲೈನ್ಸ್‌ಗೆ ಬರೋಬ್ಬರಿ 1,027 ಕೋಟಿ ರೂ. ನಷ್ಟವಾಗಿದೆ ಹಾಗೂ ಸುಮಾರು 7,057 ಕೋಟಿ ರೂ. ಸಾಲದ ಹೊರೆ ಅದರ ಮೇಲಿದೆ. ಕಳೆದ ಸೋಮವಾರದಿಂದೀಚೆಗೆ ಕಿಂಗ್‌ಫಿಶರ್ ತನ್ನ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.
ಅಷ್ಟೇ ಅಲ್ಲದೆ ಸಾರ್ವಜನಿಕ ರಂಗದ ವಾಯುಯಾನ ಸಂಸ್ಥೆಯಾದ ಏರ್ ಇಂಡಿಯಾ ಗೂ ಸರಕಾರವು ಆರ್ಥಿಕ ನೆರವು ನೀಡುವುದನ್ನೂ ಬಜಾಜ್ ವಿರೋಧಿಸಿದ್ದಾರೆ ಹಾಗೂ ಅದನ್ನು ಖಾಸಗೀಕರಣ ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications