ಕತ್ತಿಗೆ ಹಲ್ಲುಕಿತ್ತ ಹಾವು ಸುತ್ತಿಕೊಂಡಿರುವ ಈಶ್ವರಪ್ಪ!

ಒಂದಂತೂ ಸತ್ಯ. ರಾಜ್ಯಾಧ್ಯಕ್ಷ ಪಟ್ಟವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಕೆಎಸ್ ಈಶ್ವರಪ್ಪ ಅವರು ಹಲ್ಲುಕಿತ್ತ ಹಾವು ಸುತ್ತಿಕೊಂಡ ಈಶ್ವರಪ್ಪನಾಗಿದ್ದಾರೆ. ಮಾತಿನಲ್ಲಿ ಮೊದಲಿಗಿದ್ದ ದರ್ಪವಿಲ್ಲ. ಏಕಾಂಗಿಯಾಗಿ ಚುನಾವಣೆಯನ್ನು ಗೆದ್ದುಕೊಡುವ ವಿಶ್ವಾಸವಂತೂ ಇಲ್ಲವೇ ಇಲ್ಲ.
ಒಂದಾನೊಂದು ಕಾಲದಲ್ಲಿ, ಮುಖ್ಯಮಂತ್ರಿಯೇ ಆಗಲಿ ಯಾರೇ ಆಗಲಿ ತಪ್ಪು ಮಾಡಿದ್ದರೆ ಶಿಕ್ಷೆಗೊಳಗಾಗಲೇಬೇಕು ಎಂದು ಅಬ್ಬರಿಸುತ್ತಿದ್ದ ಈಶ್ವರಪ್ಪ, ಬಳ್ಳಾರಿ ಉಪ ಚುನಾವಣೆ ಸಂದರ್ಭದಲ್ಲಿ ಕೈಕೊಟ್ಟ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸತ್ ಸದಸ್ಯರನ್ನು ಉಚ್ಚಾಟಿಸುವ ಮಾತು ಹಾಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಮಾತೂ ಆಡುತ್ತಿಲ್ಲ.
ಜೈಲಲ್ಲಿದ್ದರೂ ತಮ್ಮ ತಾಕತ್ತು ಏನೆಂದು ತೋರಿಸಿರುವ ಯಡಿಯೂರಪ್ಪನವರ ಮುಂದೆ ಈಶ್ವರಪ್ಪ ಮಂಕಾಗಿರುವುದು ಸತ್ಯ. ಬಳ್ಳಾರಿ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಂತದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಯಡಿಯೂರಪ್ಪನವರಿಂದಲೇ ಬೆವರಿಳಿಸಿಕೊಂಡು ಬಂದಿದ್ದರು.
ಮುಖ್ಯಮಂತ್ರಿಯಾಗುವ ಮಾತು ದೂರವಾಯಿತು. ಸದ್ಯಕ್ಕೆ ರಾಜ್ಯಾಧ್ಯಕ್ಷ ಪಟ್ಟವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಚಿಂತಿಸುವ ಮಟ್ಟಕ್ಕೆ ಈಶ್ವರಪ್ಪನವರ ದರ್ಪ ಇಳಿದಿದೆ. ಅನೇಕ ಬಾರಿ ದೆಹಲಿಗೆ ಎಡತಾಕಿ ಬಂದಿದ್ದರೂ ಹಿರಿಯ ನಾಯಕರ ಬೆಂಬಲ ಅವರಿಗೆ ಸಿಕ್ಕಿಲ್ಲ.
ಪರಿಸ್ಥಿತಿ ಹೀಗಿರುವಾಗ, ಯಡಿಯೂರಪ್ಪ ಬಳ್ಳಾರಿಗೆ ಚುನಾವಣಾ ಪ್ರಚಾರಕ್ಕೆ ಬರದಿದ್ದರೆ, ಡಿವಿ ಸದಾನಂದ ಗೌಡರ ಜೊತೆ ಸೇರಿ ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪನವರನ್ನು ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಗೆಲ್ಲಿಸುವ ತಾಕತ್ತು ಅವರಿಗಿದೆಯೆ? ಡೌಟ್.












Click it and Unblock the Notifications