ಪರಪ್ಪನ ಅಗ್ರಹಾರ ಜೈಲಿಗೆ ಬಂದ ತಮಿಳರ ಅಮ್ಮ

ಬೆಂಗಳೂರಿನ ಕೋರ್ಟ್ ವಿಚಾರಣೆ ಹಾಜರಾತಿ ವಿನಾಯತಿ ಕೋರಿ ಸುಪ್ರೀಂಕೋರ್ಟ್ ಗೆ ಜಯಲಲಿತಾ ಪರ ವಕೀಲರು ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಂತರ, ನ್ಯಾಯಾಲಯಕ್ಕೆ ಜಯಲಲಿತಾ ಅವರು ಖುದ್ದು ಹಾಜರಾಗಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಎನ್ ಎಸ್ ಜಿ ಕಮ್ಯಾಂಡೋ ಪಡೆ ಕರೆಸಿಕೊಂಡು ಸೂಕ್ತ ಭದ್ರತೆ ಒದಗಿಸಿದ ನಂತರ ಜಯಲಲಿತಾ ಅವರು ಖಾಸಗಿ ವಿಮಾನದ ಮೂಲಕ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10 ಗಂಟೆಗೆ ಬಂದಿಳಿದರು.
ಪೊಲೀಸ್ ಸರ್ಪ ಗಾವಲು: 5 ಮಂದಿ ಡಿಸಿಪಿ, 12 ಎಸಿಪಿ, 44 ಪೊಲೀಸ್ ಇನ್ಸ್ ಪೆಕ್ಟರ್, 65 ಸಹಾಯಕ ಸಬ್ ಇನ್ಸ್ ಪೆಕ್ಟರ್, 90 ಮುಖ್ಯ ಪೇದೆ, 850 ಪೇದೆಗಳು, 200 ಮಹಿಳಾ ಪೇದೆ, 190 ಗನ್ ಮ್ಯಾನ್ ಜೊತೆಗೆ ಎನ್ ಸಿಜಿ ಭದ್ರತಾ ಪಡೆಯನ್ನು ಪರಪ್ಪನ ಅಗ್ರಹಾರ ಜೈಲಿನ ಸುತ್ತ ಮುತ್ತ ನಿಯೋಜಿಸಲಾಗಿದೆ.
ಇದಲ್ಲದೆ ಸುಮಾರು 500 ಜನ ತಮಿಳುನಾಡು ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಯಾವುದಿದು ಕೇಸ್?: 1991-96 ರ ಅವಧಿಯಲ್ಲಿ ಅಕ್ರಮವಾಗಿ 66 ಕೋಟಿ ರೂ. ಗಳಿಸಿದ ಆರೋಪವನ್ನು ಜಯಲಲಿತಾ ಅವರ ಮೇಲೆ ಹೊರೆಸಲಾಗಿದೆ. ವಿಚಾರಣೆಗೆ ಈವರೆಗೂ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಜಯಲಲಿತಾ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೂಡಾ ಒಮ್ಮೆ ಕೋರಿದ್ದರು.












Click it and Unblock the Notifications