ಸಿಬಿಐ 'ಕೈ'ವಾಡ: ತಿಹಾರ್ ಜೈಲಿನಿಂದ ಕನಿಮೊಳಿ ಶೀಘ್ರ ಬಿಡುಗಡೆ

2ಜಿ ಹಗರಣದಲ್ಲಿ ಸಿಲುಕಿರುವ ಡಿಎಂಕೆ ಸಂಸದೆ ಕನಿಮೊಳಿ ಜಾಮೀನು ಅರ್ಜಿ ವಿಚಾರಣೆ ಇದೇ 17ರಂದು ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರ ಮುಂದೆ ಬರಲಿದೆ. ಈ ಸಂದರ್ಭದಲ್ಲಿ ಜಾಮೀನಿಗೆ ವಿರೋಧ ವ್ಯಕ್ತಪಡಿಸದಿರಲು ಸಿಬಿಐ ನಿರ್ಧರಿಸಿರುವುದೇ ಇದಕ್ಕೆ ಕಾರಣವಾಗಿದೆ.
ಈ ಬೆಳವಣಿಗೆ ಹಲವರ ಹುಬ್ಬೇರಿಸಿದೆ. ಸಿಬಿಐ, ಕಾಂಗ್ರೆಸ್ ಪಕ್ಷದ ಏಜೆಂಟಿನಂತೆ ವರ್ತಿಸುತ್ತಿದೆ ಎಂಬುದಕ್ಕೆ ಇದು ಬಲವಾದ ಪುರಾವೆ ಒದಗಿಸಿದೆ. ಹೇಳಿಕೇಳಿ ಕಾಂಗ್ರೆಸ್, ಡಿಎಂಕೆಯ ಮಿತ್ರ ಪಕ್ಷ. ಅಂತಹ ಪಕ್ಷದ ಅಧಿನಾಯಕನ ಪುತ್ರಿ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸುವುದು ಎಂದರೆ ಸುಮ್ಮನೆಯ ಮಾತೇ!?
ಹಾಗಾಗಿ, ಸಿಬಿಐ ಬಂಧನವಾಗುತ್ತಿದ್ದಂತೆ ಬಿಡುಗಡೆಗೆ ಯತ್ನಿಸಿದರೆ ಸುಪ್ರೀಂಕೋರ್ಟಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಣಿಸಿದ ಮನಮೋಹನ ಆಡಳಿತ ಇದೀಗ ಕಾರ್ಯಾಚರಣೆಗೆ ಇಳಿದಿದ್ದು, ಕನಿಮೋಳಿಗೆ ಬಿಡುಗಡೆಯ ಭಾಗ್ಯ ದಯಪಾಲಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಸಿನಿಯುಗ್ ಫಿಲ್ಮ್ಸ್ ಸಂಸ್ಥಾಪಕ ಕರೀಂ ಮೊರಾನಿ ಹಾಗೂ ರಿಲಯನ್ಸ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರ ಪಿಪರಾ ಅವರೂ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಪಡೆಯುವ ನಿರೀಕ್ಷೆ ಇದೆ. ಇದಕ್ಕೂ ಸಿಬಿಐ ತಕರಾರು ಮಾಡುವುದಿಲ್ಲ ಎಂದು ತನಿಖಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications