ಆಡುಗೋಡಿಯಲ್ಲಿ ಭಾರೀ ಸ್ಫೋಟ, ಓರ್ವನ ಬಂಧನ

ಬಂಧಿತ ಮಂಜುನಾಥ್ ಮತ್ತು ತಪ್ಪಿಸಿಕೊಂಡಿರುವ ಮೊಹಿನುದ್ದೀನ್ ಮತ್ತು ಶಬ್ಬೀರ್ ಬಿಹಾರದ ಮೂಲದವರಾಗಿದ್ದು, ಗಾಯಗೊಂಡಿರುವ ಮಂಜುನಾಥ್ ತಪ್ಪಿಸಿಕೊಳ್ಳಲಾಗದೆ ಸಿಕ್ಕಿಬಿದ್ದಿದ್ದಾನೆ. ಕಸದ ತೊಟ್ಟಿಯಲ್ಲಿ ಮಂಜುನಾಥ್ ಕೈಯಲ್ಲಿದ್ದ ಪಾಕೀಟನ್ನು ಬಿಸಾಕಿದಾಗ ಭಾರೀ ಸ್ಫೋಟ ಸಂಭವಿಸಿದೆ.
ಸ್ಫೋಟ ಸುಮಾರು ಅರ್ಧ ಕಿ.ಮೀ.ವರೆಗೆ ಕೇಳಿಸಿದೆ. ಭಾರೀ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ಜನ ಭಯಭೀತರಾಗಿ ಓಡಿಹೋಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಪರೀತ ಹೊಗೆಎದ್ದು, ಉಸಿರುಗಟ್ಟಿಸುವಂತಹ ವಾಸನೆ ಹರಡಿಕೊಂಡಿತು. ಹತ್ತಿರದಲ್ಲಿದ್ದವರ ಕಣ್ಣುಗಳು ಕೂಡ ಉರಿಯಲು ಪ್ರಾರಂಭಿಸಿದವು.
ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿ, ಜನರು ಹಿಡಿದಿದ್ದ ಮಂಜುನಾಥನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಗ್ರಾನೈಟ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಆರೋಪಿಗಳು ಎಸೆದ ರಾಸಾಯನಿಕ ವಸ್ತು ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ.
ಜನ ಭಯಭೀತರಾಗಲು ಕಾರಣ, 2008ರ ಜುಲೈ 25ರಂದು ಸರಣಿ ಸ್ಫೋಟ ಸಂಭವಿಸಿದಾಗ ಆಡುಗೋಡಿಯಲ್ಲಿಯೂ ಸ್ಫೋಟ ಸಂಭವಿಸಿತ್ತು. ಈ ಘಟನೆಗೂ ಭಯೋತ್ಪಾದನೆಗೂ ಸಂಬಂಧವಿಲ್ಲ, ಜನ ಭಯಪಡುವ ಅಗತ್ಯವಿಲ್ಲ ಎಂಬ ಅಭಯ ನೀಡಿದ್ದಾರೆ.












Click it and Unblock the Notifications