ಜನಾರ್ದನ ರೆಡ್ಡಿಯೂ ಇಂದು ಬಳ್ಳಾರಿಗೆ? ಸಿಬಿಐಗೆ ಭರ್ಜರಿ ಇಳುವರಿ

ಸಿಬಿಐ ಬಂಧನದಲ್ಲಿ ಜನಾ ರೆಡ್ಡಿ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ರೆಡ್ಡಿಯನ್ನು ಇಂದು ಕರೆತರುವ ನಿರೀಕ್ಷೆ ಇದೆ. ಜತೆಗೆ ಶ್ರೀನಿವಾಸ ರೆಡ್ಡಿಗೆ ಸೇರಿದ ಲಾಕರುಗಳ ತಪಾಸಣೆ ಕಾರ್ಯ ಇಂದೂ ಮುಂದುವರಿಯಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಈ ಮಧ್ಯೆ, ಅಕ್ರಮ ಗಣಿ ಕುರಿತಂತೆ ಬಳ್ಳಾರಿ ರೆಡ್ಡಿಗಳ ದಾಖಲೆಗಳನ್ನು ಕೆದಕಲು ಶುರು ಮಾಡಿರುವ ಸಿಬಿಐಗೆ ಮತ್ತೆ ಶನಿವಾರ ಭಾರಿ 'ಇಳುವರಿ ಸಂಪಾದಿಸಿದೆ'. ಶ್ರೀನಿವಾಸ ರೆಡ್ಡಿಗೆ ಸೇರಿದ ಬ್ಯಾಂಕ್ ಲಾಕರುಗಳಲ್ಲಿ ಬರೋಬ್ಬರಿ 14 ಕೆ.ಜಿ. ಚಿನ್ನ, 2 ಲಕ್ಷ ರೂ. ನಗದು ಸುಮಾರು 40 ಕೋಟಿ ಮೌಲ್ಯದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ!. ಜನಾರ್ದನ ರೆಡ್ಡಿ ಬಂಧನದ ವೇಳೆ ಮನೆಯಲ್ಲಿ 30 ಕೆಜಿಯಷ್ಟು ಚಿನ್ನ ಪತ್ತೆಯಾಗಿತ್ತು.
ಶುಕ್ರವಾರ ರಾತ್ರಿಯೇ ಹೈದ್ರಾಬಾದ್ ಬಿಟ್ಟಿದ್ದ ತಂಡ ಬೆಳಗಿನ ಜಾವ ಆಗುವಷ್ಟರಲ್ಲೇ ಬಳ್ಳಾರಿಯ ಗಡಿಯಲ್ಲಿರುವ ಪರಮದೇವನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲೇ ವಾಸ್ತವ್ಯ ಮಾಡಿದ್ದರು. ಬೆಳಿಗ್ಗೆ 8 -30 ರ ಸುಮಾರಿಗೆ ಹೊರಟು ಬಳ್ಳಾರಿಯ ಪಾರ್ವತಿ ನಗರದಲ್ಲಿರುವ ಆಕ್ಸಿಸ್ ಬ್ಯಾಂಕ್‌ಗೆ 9-30 ರ ಸುಮಾರಿಗೆ ಆಗಮಿಸಿದರು. ಬ್ಯಾಂಕ್‌ನಲ್ಲಿ ಶ್ರೀನಿವಾಸ ರೆಡ್ಡಿಗೆ ಸೇರಿದ 6 ಲಾಕರ್ ಗಳನ್ನು ಪರಿಶೀಲನೆ ಮಾಡಿದೆ.
ಲಾಕರ್ ಗೆ ಸುತ್ತಿಗೆ ಪೆಟ್ಟು: ಸಿಬಿಐ ಇನ್ಸ್‌ಪೆಕ್ಟರ್ ಸೋಮಯ್ಯ ನೇತೃತ್ವದ ತಂಡ ಬೆಳಿಗ್ಗೆ ಬ್ಯಾಂಕ್ ತನ್ನ ವಹಿವಾಟು ಆರಂಭಿಸುವ ಮುನ್ನವೇ ಬ್ಯಾಂಕ್ ಒಳಗೆ ಪ್ರವೇಶಿಸಿ ತಪಾಸಣೆ ಆರಂಭಿಸಿತು. ಈ ಕಾರ್ಯ ರಾತ್ರಿವರೆಗೂ ನಡೆಯಿತು. ಬ್ಯಾಂಕ್‌ನಲ್ಲಿ ಲಾಕರುಗಳ ಕೀಲಿ ಸಿಗದೆ ಮಧ್ಯಾಹ್ನದವರೆಗೂ ಪರದಾಡಬೇಕಾಯಿತು.
ಬಳ್ಳಾರಿಯ ಇಬ್ಬರು ಕೀಲಿ ರಿಪೇರಿ ಮಾಡುವರನ್ನು ಕರೆ ತರಲಾಯಿತು. ಆದರೆ ಅವರಿಂದಲೂ ಲಾಕರ್ ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಂಧ್ರದ ಅನಂತಪುರಂನಿಂದ ಕೀ ತಜ್ಞರನ್ನು ಕರೆಸಿ ಲಾಕರುಗಳನ್ನು ಒಡೆಯಲಾಯಿತು ಎಂದು ತಿಳಿದು ಬಂದಿದೆ.
ರೆಡ್ಡಿ ಸಂಸಾರ ದರ್ಶನ: ಕಳೆದ ಹದಿಮೂರು ದಿನಗಳಿಂದ ಸಿಬಿಐ ಬಂಧನದಿಂದ ಆಂಧ್ರದ ಚಂಚಲಗುಡಾ ಜೈಲು ಸೇರಿದ ಬಳಿಕ ಮೊದಲ ಬಾರಿಗೆ ಬಳ್ಳಾರಿಗೆ ವಿಚಾರಣೆಗಾಗಿ ಕರೆತಂದ ಹಿನ್ನೆಲೆಯಲ್ಲಿ ಶ್ರೀನಿವಾಸ ರೆಡ್ಡಿ ಅವರ ಪತ್ನಿ ಶ್ರೀಲತಾ ಹಾಗೂ ಮಕ್ಕಳು ಮತ್ತು ಶ್ರೀನಿವಾಸ ರೆಡ್ಡಿಯ ತಂದೆ ತಾಯಿ ಸೇರಿದಂತೆ ಅನೇಕ ಸಂಬಂಧಿಕರು ಭೇಟಿಯಾಗಿ ಮಾತನಾಡಿದರು. ಆದರೆ ಇವರನ್ನು ಕೂಡ ವಿಚಾರಣೆಗಾಗಿ ಬ್ಯಾಂಕ್‌ಗೆ ಕರೆಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.
ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಮತ್ತು ಬ್ಯಾಂಕ್‌ನ ಕೆಲ ಲಾಕರುಗಳು ಅವರ ಪತ್ನಿ ಮತ್ತು ಸಂಬಂಧಿಕರ ಹೆಸರಿನಲ್ಲಿದ್ದ ಲಾಕರ್ ಕೀಲಿಗಳನ್ನು ತೆಗೆದುಕೊಂಡು ಬಂದಿದ್ದರು ಎಂದು ಸಹ ತಿಳಿದು ಬಂದಿದೆ.












Click it and Unblock the Notifications