ಕಚೇರಿ ಎದುರೇ ಬಿಬಿಎಂಪಿ ನೌಕರನ ಭೀಕರ ಕೊಲೆ

ಆಡುಗೋಡಿಯ ಚಂದ್ರಪ್ಪ ಲೇಔಟ್ ನಿವಾಸಿ ಬಿಬಿಎಂಪಿ ನೌಕರ ಮುತ್ಯಾಲಪ್ಪ(38) ಸಾವನ್ನಪ್ಪಿದ ದುರ್ದೈವಿ.
ಬಿಬಿಎಂಪಿಯಲ್ಲಿ ಡಿ ಗ್ರೂಪ್ ನ ನೌಕರನಾಗಿದ್ದ ಮುತ್ಯಾಲಪ್ಪ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಟಪಾಲು ಒಯ್ಯುವ ಕೆಲಸ ನಿರ್ವಹಿಸುತ್ತಿದ್ದ. ಜೆಸಿ ರಸ್ತೆಯಲ್ಲಿರುವ ಬಿಬಿಎಂಪಿ ಕಚೇರಿಗೆ ಇಂದು ಎಂದಿನಂತೆ ಬೆಳಗ್ಗೆ 11.30ಕ್ಕೆ ಕೆಲಸಕ್ಕೆ ಹಾಜರಾಗಿದ್ದಾನೆ.
ಸ್ಕೂಟರ್ ಪಾರ್ಕ್ ಮಾಡಿ, ಕಾಗದಗಳನ್ನು ತೆಗೆದುಕೊಳ್ಳುತ್ತಿದ್ದಾಗ ಹಿಂದಿನಿಂದ ಬಂದು ದಾಳಿ ಮಾಡಿದ ಇಬ್ಬರು ದುಷ್ಕರ್ಮಿಗಳು ಮುತ್ಯಾಲಪ್ಪನ ಕುತ್ತಿಗೆಗೆ ಮೂರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತ ಸೋರಿಕೆಯಿಂದ ಮುತ್ಯಾಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಏನು ಕಾರಣ: ಹಳೆ ದ್ವೇಷ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಜಂಟಿ ಪೊಲೀಸ್ ಆಯುಕ್ತ ಪ್ರಣಬ್ ಮೊಹಾಂತಿ, ಡಿಸಿಪಿ ಸಿದ್ದರಾಮಪ್ಪ, ಎಸಿಪಿ ಸೊಲಭೇಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೌಕರರ ಪ್ರತಿಭಟನೆ: ಕಚೇರಿ ಮುಂಭಾಗದಲ್ಲೇ ನಡೆದ ಕೊಲೆಯನ್ನು ಖಂಡಿಸಿ ಬಿಬಿಎಂಪಿ ನೌಕರರು ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರನ್ನು ಆಗ್ರಹಿಸಿದರು.












Click it and Unblock the Notifications