ಕಡಪ ಬಿಡ್ಡಗೆ ಜೈಲಾ? ಬಳ್ಳಾರಿ ರೆಡ್ಡಿಗೆ ಬೇಲಾ? ಬೆಟ್ ಕಟ್ಟಿ

ಚಂಚಲಗುಡ ಜೈಲಿನಲ್ಲಿ ಎಂಟು ದಿನ ಕಳೆದಿರುವ ರೆಡ್ಡಿ ಇನ್ನೆಷ್ಟು ದಿನ ಜೈಲಿನಲ್ಲಿರುತ್ತಾರೆ. ಜಗನ್ ನನ್ನು ಸಿಬಿಐ ಯಾವತ್ತು ಬಂಧಿಸಬಹುದು. ಜಗನ್ ಗೆ ನೀಡುವ ಖೈದಿ ಸಂಖ್ಯೆ ಎಷ್ಟು? ಹೀಗೆ ಬೆಟ್ ಕಟ್ಟುವವರಿಗೆ ವಿವಿಧ ಆಯ್ಕೆಗಳಿವೆ.
ಜನಾರ್ದನ ರೆಡ್ಡಿ ಬಳಿಕ ಜೈಲಿಗೆ ಹೋಗುವ ಸರದಿ ವೈ ಎಸ್ ಜಗನ್‌ಮೋಹನ್ ರೆಡ್ಡಿಯದ್ದು ಎಂದು ಎಲ್ಲೆಡೆ ಸುದ್ದಿಯಾಗಿದೆ. ಸಿಬಿಐ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಾ ಜಗನ್ ತಪ್ಪಿಸಿಕೊಳ್ಳುತ್ತಿದ್ದಾರೆ. ಜಗನ್ ಸ್ವಂತ ಕ್ಷೇತ್ರ ರಾಯಲಸೀಮೆಯ ಕಡಪಾ ಜಿಲ್ಲೆಯಲ್ಲಿ ಜಗನ್ ಮುಂದಿಟ್ಟುಕೊಂಡು ಕೋಟ್ಯಂತರ ರೂ.ಗಳ ಬೆಟ್ಟಿಂಗ್ ನಡೆಯುತ್ತಿದೆ.
ಗುತ್ತಿಗೆದಾರರ ನೇತೃತ್ವ ಪ್ರೊದ್ದತೂರು, ಕಡಪಾ ಪಟ್ಟಣದ ಕೆಲವು ಪ್ರದೇಶಗಳು, ಪುಲಿವೆಂದುಲ, ಜಮ್ಮಲಮಡುಗು ಮತ್ತು ರಾಯಚೊಟಿಯಲ್ಲಿ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ಸಾಗಿದೆ. ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ಹರಿದು ಬರುತ್ತಿದ್ದು, ಬುಕ್ಕಿಗಳು ಜಗನ್ ಬಂಧನದ ಬೇರೆ ಬೇರೆ ಸಮಯಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಗೊಳಿಸಿದ್ದಾರೆ.
ಪ್ಯಾಕೇಜ್ ಡೀಲ್ : ಮಾಸಿಕ ಮತ್ತು ದ್ವೈಮಾಸಿಕ ಪ್ಯಾಕೇಜ್‌ಗಳನ್ನು ಘೋಷಿಸಿರುವ ಬುಕ್ಕಿಗಳು, ಎರಡು ತಿಂಗಳಲ್ಲಿ ಜಗನ್ ಬಂಧನಕ್ಕಿಂತ ಒಂದು ತಿಂಗಳಲ್ಲಿ ಬಂಧನಕ್ಕೆ ಹೆಚ್ಚಿನ ಬೆಟ್ಟಿಂಗ್ ದರವನ್ನು ನಿಗದಿಪಡಿಸಲಾಗಿದೆ.ಬೆಟ್ಟಿಂಗ್‌ಗೆ ಹತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ನಿಗದಿಪಡಿಸಿದ್ದಾರೆನ್ನಲಾಗಿದೆ.
ಬೆಟ್ಟಿಂಗ್ ಸಂಸ್ಕೃತಿ: ಕಡಪಾ ಜಿಲ್ಲೆ ವಾಣಿಜ್ಯ ಕೇಂದ್ರ ಪ್ರೊದತೂರಿನಲ್ಲಿ ಚಿನ್ನದ ವ್ಯಾಪಾರಿಗಳು, ಜವಳಿ ಮಾರಾಟಗಾರರು ಮತ್ತು ಗುತ್ತಿಗೆದಾರರು ಅಧಿಕಾರಸ್ಥರೊಂದಿಗೆ ಸಖ್ಯ ಬೆಳೆಸಿಕೊಂಡು ಭಾರೀ ದುಡ್ಡು ಮಾಡುತ್ತಿದ್ದಾರೆ. ಬೆಟ್ ಕಟ್ಟಲು ಅವರು ಸದಾ ಏನಾದರೊಂದು ನೆಪವನ್ನು ಹುಡುಕುತ್ತಿರುತ್ತಾರೆ.
ಪ್ರೊದತೂರಿನಲ್ಲಿ ಮಳೆ ಸುರಿಯುತ್ತಿದ್ದರೆ, ಕಡಪಾದಲ್ಲಿ ಮಳೆಯಾಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಬೆಟ್ಟಿಂಗ್ ನಡೆದಿತ್ತು ಎಂಬ ಸುದ್ದಿ ಇದೆ. ಬೆಟ್ಟಿಂಗ್ ದಂಧೆ ಮೂಲಕ ಕೋಟ್ಯಂತರ ರೂ.ಗಳು ಹರಿದಾಡುತ್ತಿದ್ದು, ಜಗನ್ ಸುದ್ದಿ ಈಗ ಹಾಟ್ ಟಾಪಿಕ್ ಆಗಿದೆ.
ಪೊಲೀಸ್ ಏನು ಹೇಳ್ತಾರೆ?: ಕ್ರಿಕೆಟ್‌ನಂತೆ ಇದು ಸಂಘಟಿತ ಬೆಟ್ಟಿಂಗ್ ಅಲ್ಲ, ಯಾವುದೇ ಸಾಕ್ಷ್ಯಾಧಾರವಿರುವುದಿಲ್ಲ. ಆದ್ದರಿಂದ ಇದರಲ್ಲಿ ಭಾಗಿಯಾದವರ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.












Click it and Unblock the Notifications