ಪಟಾಕಿ ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಬೆಂಗಳೂರು
ಬೆಂಗಳೂರು, ಸೆ. 10 : ಸೆಪ್ಟೆಂಬರ್ 7ರಂದು ಆದ ಬಾಂಬ್ ಸ್ಫೋಟದ ನಂತರ ಸಣ್ಣ ಸದ್ದು ಕೇಳಿದರೂ ಬೆಂಗಳೂರಿನ ಜನ ಬೆಚ್ಚಿಬೀಳುತ್ತಿದ್ದಾರೆ. ವಿಪರೀತ ಜನದಟ್ಟಣೆ ಇರುವ ಸ್ಥಲದಲ್ಲಿ ಕೂಡ ಹೆಚ್ಚಿನ ಭದ್ರತೆ ಇಲ್ಲದಿರುವುದು ಜನರ ಆತಂಕದಿಂದ ಓಡಾಡುವಂತಾಗಿದೆ.
ಶುಕ್ರವಾರ ಸಂಜೆ 8 ಗಂಟೆಗೆ ನಡೆದದ್ದಿಷ್ಟು. ಮಿನರ್ವ ವೃತ್ತದ ಬಳಿ ಕಿಡಿಗೇಡಿಯೊಬ್ಬ ಪಟಾಕಿಯನ್ನು ಡಸ್ಟ್ ಬಿನ್ ನಲ್ಲಿ ಇಟ್ಟು ಕಿಡಿ ಹತ್ತಿಸಿದ್ದು ಜನರನ್ನು ಸಾಕಷ್ಟು ಗಲಿಬಿಲಿಯಲ್ಲಿ ತಳ್ಳಿತು. ಅದು ಸಿಡಿದ ನಂತರ ಕೇಳಿಬಂದ ಭಾರೀ ಸದ್ದು ಬಾಂಬ್ ಸ್ಫೋಟವೇ ಇರಬಹುದೆಂದು ಜನ ಕಂಗಾಲಾಗಿ ದಿಕ್ಕಾಪಾಲಾಗುವಂತಾಯಿತು.
ಕೂಡಲೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು, ಇಡೀ ಸ್ಥಳವನ್ನು ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸರು ಸುತ್ತುವರಿದರು. ಕ್ಷಿಪ್ರ ಕ್ರಿಯಾ ದಳವನ್ನು ಕರೆಸಲಾಯಿತು. ಅಡ್ಡಾಡುತ್ತಿದ್ದ ಜನರೆಲ್ಲ ಆತಂಕದಿಂದ ನೋಡುತ್ತಿದ್ದರು. ಸಾಕಷ್ಟು ಹುಡುಕಾಟ ನಡೆಸಿದ ಮೇಲೆ ತಿಳಿದದ್ದೇನೆಂದರೆ ಅದು ಬಾಂಬ್ ಅಲ್ಲ ಪಟಾಕಿ ಸದ್ದೆಂದು.
ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ರಾಜ್ಯ ಪೊಲೀಸ್ ಪಡೆ ಸನ್ನದ್ಧವಾಗಿದೆ. ಇಂತಹ ಘಟನೆಯಿಂದ ಜನ ಆತಂಕಕ್ಕೊಳಗಾಗಬಾರದು, ಇಲ್ಲಸಲ್ಲದ ಸುದ್ದಿಯನ್ನು ಕಿವಿಯಿಂದ ಕಿವಿಗೆ ದಾಟಿಸಬಾರದು ಎಂದು ಜಂಟಿ ಪೊಲೀಸ್ ಆಯುಕ್ತ (ಕ್ರೈಂ) ಪ್ರೊಣೊಬ್ ಮೋಹಾಂತಿ ಜನರಿಗೆ ಮನವಿ ಮಾಡಿಕೊಂಡರು.













Click it and Unblock the Notifications