ಬಾಲಿವುಡ್ ಮಂದಿಗೂ ಪಂಗನಾಮ: ಸಿಬಿಐನಿಂದ 40 ಕೆಜಿ ಚಿನ್ನ ವಶ

ಹತ್ತನೆ ತರಗತಿ ಅರ್ಧದಲ್ಲೇ ಬಿಟ್ಟಿರುವ ಅಶ್ವಿನಿ ಕುಮಾರ್ ಶರ್ಮಾ ಮತ್ತು ಎಂಬಿಎ ಪದವೀಧರ ರಾಜೇಶ್ ರಂಜನ್ ಎಂಬವರು ಮುಂಬೈಯಲ್ಲಿ ತಾವು ಹಿರಿಯ ಸರಕಾರಿ ಅಧಿಕಾರಿಗಳೆಂದು ಪೋಸು ನೀಡಿ, ಉದ್ಯಮಿಗಳು ಮತ್ತು ಚಿತ್ರೋದ್ಯಮಿಗಳನ್ನು ವಂಚಿಸಿದ ವಿಷಯ ವರದಿಯಾಗಿದೆ. ಈ ಖದೀಮರು, ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ಸಹಿತ ಸುಮಾರು 20 ಮಂದಿಯನ್ನು ವಂಚಿಸಿರುವುದು ಸಿಬಿಐ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಾಕಷ್ಟು ಮುಂಚಿತವಾಗಿಯೇ 'ಮಿಕ'ವನ್ನು ಗುರುತಿಸುತ್ತಿದ್ದ ಈ ಖದೀಮರು, ಬಳಿಕ ಅವರನ್ನು ಯಾವುದಾದರೂ ವಿವಾದ ಕಾಡುತ್ತಿದೆಯೇ ಎಂದು 'ಪರಿಶೀಲಿಸುತ್ತಿದ್ದರು'. ಬಳಿಕ ಆ ವಿವಾದಗಳನ್ನು ಮುಂದಿಟ್ಟುಕೊಂಡು ಅವರನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಆರಂಭಿಸುತ್ತಿದ್ದರು.
ಶರ್ಮಾ ಪೊಲೀಸ್ ವರಿಷ್ಠಾಧಿಕಾರಿ, ಸಿಬಿಐ ಅಧಿಕಾರಿ ಅಥವಾ ಪೊಲೀಸ್ ಅಧಿಕಾರಿಯ ಪೋಸು ನೀಡುತ್ತಿದ್ದನು. ಬಳಿಕ ರಂಜನ್ ಅವರಲ್ಲಿಗೆ ತೆರಳಿ ಇನ್ನುಳಿದ ಕೆಲಸಗಳನ್ನು ಮಾಡಿ, ವ್ಯವಹಾರ ಕುದುರಿಸುತ್ತಿದ್ದನು ಎಂದು ಸಿಬಿಐ ಮೂಲಗಳು ತಿಳಿಸಿವೆ.
ತನ್ನ ಕೈಟ್ ಚಿತ್ರದ ಚಿತ್ರೀಕರಣದ ಸಂದರ್ಭ ತಾನು ಎದುರಿಸುತ್ತಿದ್ದ ವಿವಾದವೊಂದನ್ನು ಇತ್ಯರ್ಥಪಡಿಸಲು ಅವರಿಗೆ ರೂ. 50 ಲಕ್ಷ ಪಾವತಿಸಿದ್ದೇನೆ ಎಂದು ರೋಶನ್ ಹೇಳಿದ್ದಾರೆ. ಸಿಬಿಐ ಬಂಧಿತರಿಂದ 28 ಲಕ್ಷ ರೂ. ನಗದು, ನಕಲಿ ಎಫ್‌ಐಆರ್, ದೋಷಾರೋಪ ಪಟ್ಟಿಗಳನ್ನು ವಶಪಡಿಸಿಕೊಂಡಿದೆ.
ಕೈಟ್ ಚಿತ್ರದ ವಿವಾದಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಯಂತೆ ರೋಶನ್ ಬಳಿಗೆ ತೆರಳಿದ ಶರ್ಮಾ, ಬೀನಾ ಶಾ ಎಂಬುವವರು ನೀಡಿರುವ ದೂರಿನ ಆಧಾರದಲ್ಲಿ ಅವರನ್ನು ಬಂಧಿಸುವುದಾಗಿ ಬೆದರಿಕೆಯೊಡ್ಡಿದ್ದನು. ಬಳಿಕ ರೋಶನ್, ಶರ್ಮಾನನ್ನು ಭೇಟಿಯಾಗಿ ವ್ಯವಹಾರ ಕುದುರಿಸಿಕೊಂಡಿದ್ದರು. ತಾನು ವಂಚನೆಗೊಳಗಾಗಿದ್ದೇನೆ ಎಂಬುದು ಅರಿವಿಗೆ ಬರುತ್ತಿದ್ದಂತೆ ರೋಶನ್ ಸಿಬಿಐಗೆ ದೂರು ನೀಡಿದ್ದರು.












Click it and Unblock the Notifications