ಅಣ್ಣಾ ಹಜಾರೆ ಬೆಂಬಲಿಸಿ ಆ.25 ಯಾದಗಿರಿ ಬಂದ್

ಇಂದು ಬೆಳಗ್ಗೆ 9 ಗಂಟೆಗೆ ನಗರದ ಮೈಲಾಪುರ್ ಅಗಸಿಯಿಂದ ಮಹಾತ್ಮಾ ಗಾಂಧಿ ಪ್ರತಿಮೆವರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದಲ್ಲಿ ಅಂಗಡಿ ಮಾಲಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅಣ್ಣಾ ಹಜಾರೆಗೆ ಬೆಂಬಲ ನೀಡಿದರು. ಹೆಚ್ಚೂಕಡಿಮೆ ಎಲ್ಲ ಅಂಗಡಿಗಳೂ ಬೀಗ ಜಡಿದಿದ್ದವು.
ನಗರದ ನಾಗರಿಕರು ಇನ್ನು ಮುಂದೆ ಭ್ರಷ್ಟಾಚಾರಕ್ಕೆ ಯಾವುದೇ ರೀತಿಯಲ್ಲಿಯೂ ಅವಕಾಶ ನೀಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಗರದ ನಾಗರಿಕರು ನಾಯಿಗಳನ್ನು ಹಿಡಿದುಕೊಂಡು ಬಂದು ಅಣ್ಣಾ ಚಳವಳಿಯನ್ನು ಬೆಂಬಲಿಸಿ, ಭ್ರಷ್ಟಾಚಾರದ ವಿರುದ್ಧ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಭ್ರಷ್ಟಾಚಾರವೂ ಯಾದಗಿರಿ ಜಿಲ್ಲೆ ಉಳಿದೆಲ್ಲ ಜಿಲ್ಲೆಗಳಿಗಿಂತ ಹಿಂದುಳಿಯಲು ಪ್ರಮುಖ ಕಾರಣ ಎಂಬ ಅಭಿಪ್ರಾಯವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರವನ್ನು ಮೆಟ್ಟಿ ಅಭಿವೃದ್ಧಿಯತ್ತ ಗಮನ ಹರಿಸಿದರೆ ಜಿಲ್ಲೆ ಅಭಿವೃದ್ಧಿಯ ಪಥದತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂಬ ಅನಿಸಿಕೆ ಅವರದು.
ಅಂದ ಹಾಗೆ, ಇದೇ ಆ.28ರಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲೆಯ ಸುರಪುರಕ್ಕೆ ಆಗಮಿಸಲಿದ್ದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.












Click it and Unblock the Notifications