For Daily Alerts
ಕದ್ರಿಯಲ್ಲಿ ಅನಾವರಣಗೊಂಡ ಬಾಲಕೃಷ್ಣರ ಲೀಲೆ
ಮಂಗಳೂರು, ಆ.22 : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಪುಟಾಣಿಗಳಿಗಾಗಿ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಕಲ್ಕೂರಾ ಪ್ರತಿಷ್ಠಾನ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಹಾಲುಗೆನ್ನೆಯ ಹಸುಗೂಸಿನಿಂದ ಹಿಡಿದು ವಿವಿಧ ವಯೋಮಾನದ ಮಕ್ಕಳಿಗಾಗಿ ಪ್ರತೇಕ ಸ್ಪರ್ಧೆ ಆಯೋಜಿಸಲಾಗಿತ್ತು. ಬಗೆ ಬಗೆಯ ಚಿತ್ತಾಕರ್ಷಕ ವೇಷ ತೊಟ್ಟು ಕೃಷ್ಣನ ಬಾಲಲೀಲೆಗಳನ್ನು ತೋರ್ಪಡಿಸುವ ಮೂಲಕ ಮಕ್ಕಳು ಸಹಸ್ರಾರು ಮಂದಿಯ ಮನಗೆದ್ದರು.
ಬೆಣ್ಣೆ ಕದ್ದು ತಿನ್ನುವ ದೃಶ್ಯಗಳನ್ನು ಪುಟಾಣಿಗಳು ಅಭಿನಯಿಸಿದ್ದಂತೂ ಮನಮೋಹಕವಾಗಿತ್ತು. ಕೆಲವು ಮಕ್ಕಳು ನೆರೆದಿದ್ದ ಜನಸಾಗರವನ್ನು ಕಂಡು ಬಿಕ್ಕಳಿಸಿ ಅಳುತ್ತಿದ್ದರೆ, ಬೆಣ್ಣೆಯೆಂದು ಐಸ್ ಕ್ರೀಮ್ ತಿನ್ನುವ ತವಕದಲ್ಲಿದ್ದರು ಮತ್ತೆ ಹಲವರು. ಯಶೋದೆ ಕೃಷ್ಣ, ಕಾಳಿಂಗ ಮರ್ಧನ ಕೃಷ್ಣ ಹೀಗೆ ಕೃಷ್ಣನ ಅವತಾರಗಳು ರಂಗದ ಮೇಲೆ ಮೂಡಿದ್ದವು. ಅಂತೂ ಪುಟಾಣಿಗಳ ಈ ವೇಷ ಸ್ಪರ್ಧೆ ಎಲ್ಲರ ಗಮನ ಸೆಳೆದದ್ದಂತೂ ದಿಟ.