ಲೋಕಾಯುಕ್ತದ ಭ್ರಷ್ಟ ತಿಮಿಂಗಲಗಳನ್ನು ಹೊರಹಾಕಿದ ಶಿವರಾಜ್

ಬಳ್ಳಾರಿಯ ಅಕ್ರಮ ಗಣಿಗಾರಿಕೆ ಮಾಫಿಯಾದ ಪ್ರಮುಖ ವ್ಯಕ್ತಿ ಖಾರದಪುಡಿ ಮಹೇಶ್‌ನಿಂದ ಲಂಚ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಬಳ್ಳಾರಿಯ ಲೋಕಾಯುಕ್ತ ಎಸ್‌ಪಿ ಅಶೋಕ ಸದಲಗಿ, ಗುಲ್ಬರ್ಗ ಲೋಕಾಯುಕ್ತ ಎಸ್‌ಪಿ ಮಹಾಂತೇಶ್ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಆದೇಶ ಹೊರಡಿಸಲಾಗಿದೆ.
ದೂರುಗಳ ಹಿನ್ನೆಲೆಯಲ್ಲಿ ರಾಮನಗರ ಲೋಕಾಯುಕ್ತ ಎಸ್‌ಪಿ ಎ.ಎನ್. ಸ್ವಾಮಿ ಮತ್ತು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸ್ ವಿಭಾಗದ ಡಿವೈಎಸ್‌ಪಿ ಎಂ.ವಿ. ವೆಂಕಟನಾಯ್ಕ ಅವರಿಗೆ 'ಗೇಟ್‌ಪಾಸ್' ನೀಡಲಾಗಿದೆ.
ಬಳ್ಳಾರಿಯ ಲೋಕಾಯುಕ್ತ ಕಚೇರಿ ಹೆಸರಿನಲ್ಲಿ ಮತ್ತು ಗುಲ್ಬರ್ಗ ಲೋಕಾಯುಕ್ತ ಎಸ್‌ಪಿ ಹೆಸರಿನಲ್ಲಿ ಖಾರದಪುಡಿ ಮಹೇಶ್ ಲಂಚ ನೀಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ದಾಖಲೆ ಒದಗಿಸಿತ್ತು. ಅದನ್ನು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಡಾ.ಯು.ವಿ. ಸಿಂಗ್ ತಮ್ಮ ವರದಿಯಲ್ಲಿ ಅಡಕಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಚೇರಿಗಳ ಮೇಲೆ ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅವ್ಯವಹಾರ ಬಯಲು ಮಾಡಿದ್ದರು. ಈ ಕಾರ್ಯಾಚರಣೆಗೆ ಬೆಂಗಳೂರು ನಗರ ವಿಭಾಗದ ಲೋಕಾಯುಕ್ತ ಪೊಲೀಸ್ ತಂಡವನ್ನು ಬಳಸಲಾಗಿತ್ತು. ದಾಳಿಗೆ ಒಳಗಾದ ಉಪ ನೋಂದಣಿ ಕಚೇರಿಯೊಂದರ ಅಧಿಕಾರಿಗಳು ಲೋಕಾಯುಕ್ತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮಾಂತರ ಜಿಲ್ಲೆ ಡಿವೈಎಸ್‌ಪಿ ವೆಂಕಟನಾಯ್ಕ ವಿರುದ್ಧ ದೂರು ಹೇಳಿಕೊಂಡಿದ್ದರು. ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಇರುವುದು ಅವರನ್ನು ಸಂಸ್ಥೆಯಿಂದ ಹೊರ ಕಳುಹಿಸಲು ಕಾರಣ ಎಂದು ಗೊತ್ತಾಗಿದೆ.
ಕೋರಿಕೆಯ ಮೇರೆಗೆ ಬಿಡುಗಡೆ: ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿದ್ದ ಡಿವೈಎಸ್‌ಪಿಗಳಾದ ಎಚ್.ಆರ್.ರಾಧಾಮಣಿ ಮತ್ತು ಎಸ್.ಸುರೇಶ್ ಬಾಬು ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವಕ್ಕೂ ಲೋಕಾಯುಕ್ತರು ಒಪ್ಪಿಗೆ ಸೂಚಿಸಿದ್ದಾರೆ. ಈ ಇಬ್ಬರು ಅಧಿಕಾರಿಗಳೂ ಕೆಲ ದಿನಗಳಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗದಿಂದ ಪೊಲೀಸ್ ಇಲಾಖೆಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications