ಸಂತೋಷ್ ಎಚ್ಚರಿಕೆ: ಅಣ್ಣಾ ಹೋರಾಟ ಕಡೆಗಣಿಸಿದರೆ ಭಾರಿ ಬೆಲೆ

ಫ್ರೀಡಂ ಪಾರ್ಕ್‌ನಲ್ಲಿ ಅಣ್ಣಾ ಹಜಾರೆ ಬೆಂಬಲಿಸಿ ಭ್ರಷ್ಟಾಚಾರದ ವಿರುದ್ಧ ಭಾರತ ಜನ ಸಂಘಟನೆ ನಡೆಸುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಸೂಕ್ಷ್ಮತೆ ಎಂಬುದು ಇದ್ದರೆ ಜನರ ಭಾವನೆಗಳಿಗೆ ಲಕ್ಷ್ಯ ಕೊಡಬೇಕು. ಇಲ್ಲದೇ ಹೋದರೆ 1977ರ ತುರ್ತು ಪರಿಸ್ಥಿತಿ ಮರುಕಳಿಸ ಬಹುದು. ಇದರಿಂದ ಸರಕಾರ ಅಧಿಕಾರ ಕಳೆದುಕೊಳ್ಳಲೂಬಹುದು ಎಂದರು.
ಸತ್ಯಾಗ್ರಹಗಳ ಮೂಲಕ ಮೈದಾನದಲ್ಲಿ ಕಾನೂನು ರಚನೆ ಸಾಧ್ಯವಿಲ್ಲ ಎಂಬ ಪ್ರಧಾನಿ ಮಾತಿಗೆ ಮಾರ್ನುಡಿದ ನಿವೃತ್ತ ಲೋಕಾಯುಕ್ತರು, ಇಂತಹ ಹೇಳಿಕೆಗಳಿಂದ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ನಾವು (ಅಣ್ಣಾ ಹಜಾರೆ ತಂಡ) ಕಾನೂನು ರಚನೆ ಮಾಡುತ್ತಿಲ್ಲ; ಕೇವಲ ಸಲಹೆಗಳನ್ನು ಮಾತ್ರ ನೀಡುತ್ತಿದ್ದೇವೆ ಎಂದರು. ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ಕರಡಿನ ಜೊತೆಗೆ ನಾವು ರಚಿಸಿದ ಜನ ಲೋಕಪಾಲ ಕರಡನ್ನು ಸರಕಾರ ಸಂಸತ್ತಿನ ಸ್ಥಾಯಿ ಸಮಿತಿಗೆ ರವಾನಿಸಬೇಕು ಎಂದು ನ್ಯಾ. ಹೆಗ್ಡೆ ಒತ್ತಾಯಿಸಿದರು.
ನಾಗರಿಕ ಸಮಾಜದ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ, ಮಸೂದೆ ಜಾರಿಗೊಳಿಸುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ. ಮಸೂದೆ ಸಂಸತ್ತಿನಲ್ಲಿ ಚರ್ಚೆಯ ಹಂತದಲ್ಲಿರುವಾಗ ಮತ್ತು ಅದರ ಬಗ್ಗೆ ವಿಮರ್ಶೆ ಹಾಗೂ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ನಮ್ಮ ಜತೆ (ನಾಗರಿಕ ಸಮಿತಿ) ನಡೆದುಕೊಂಡ ರೀತಿ ಸರಿ ಇರಲಿಲ್ಲ. ಸಂಸತ್ತಿನಲ್ಲಿ ರಚಿಸಿದ ಕಾನೂನುಗಳನ್ನು ಪ್ರಶ್ನಿಸಬಹುದು ಮತ್ತು ಸುಪ್ರೀಂಕೋರ್ಟ್ ಇಲ್ಲವೆ ಹೈಕೋರ್ಟ್ ಅವುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬಹುದು. ಹೀಗಿರುವಾಗ ಸಂಸತ್ತೇ ಹೇಗೆ ಸುಪ್ರೀಂ ಆಗಲು ಸಾಧ್ಯ ಎಂದು ನ್ಯಾ. ಹೆಗ್ಡೆ ಪ್ರಶ್ನಿಸಿದರು.












Click it and Unblock the Notifications