ಕಟ್ಟಾ, ರಾಜ, ಕನ್ನಿ ಜೈಲೊಳಗೆ, ಹಿಡಿ ಸ್ವೀಟ್ ಬಾಯೊಳಗೆ

ಪರಪ್ಪನ ಅಗ್ರಹಾರದಲ್ಲಿ 65 ನೇ ಸ್ವಾತಂತ್ರ್ಯೋತ್ಸವ ಎಂದಿಗಿಂತ ಕೊಂಚ ವಿಜ್ರಂಭಣೆಯಿಂದ ನಡೆಯಬಹುದಿತ್ತು. ಮಾಜಿ ಮಂತ್ರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೊತೆಯಲ್ಲಿರುವುದು ಹೆಚ್ಚಿನ ಕೈದಿಗಳಿಗೆ ಆನೆ ಬಲ ತಂದಿತ್ತು. ಆದ್ರೆ ಬಿಡುಗಡೆ ಬೇಡಿ ಕೈದಿಗಳು ನಿರಶನ ಮಾಡುತ್ತಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಕೊಂಚ ಮಂಕಾಗಿತ್ತು.
ತಿಹಾರ್ ಜೈಲಿನಲ್ಲೂ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು. ಆದ್ರೆ ಇಲ್ಲೂ ಮೂರು ರಾಜಕಾರಣಿಗಳು ಜೊತೆಗಿದ್ದರಿಂದ ಸ್ವಾತಂತ್ರ್ಯದ ಸಂಭ್ರಮ ತುಸು ಜೋರಾಗಿಯೇ ಇತ್ತು.
2ಜಿ ಸ್ಪೆಕ್ಟ್ರಮ್ ಹಗರಣದ ರೂವಾರಿಗಳು ಧ್ವಜಾರೋಹಣ ಸಮಾರಂಭವನ್ನು ಕಣ್ತುಂಬಿಕೊಂಡರು. ಊರಿನ ಪ್ರಾಥಮಿಕ ಶಾಲೆಯಿಂದ ಹಿಡಿದು ಸರ್ಕಾರಿ ಕಚೇರಿ, ರಾಜಧಾನಿಯ ಧ್ವಜಾರೋಹಣದಲ್ಲಿ ಭಾಗವಹಿಸಿದ ಆ ದಿನಗಳು ಅವರ ನೆನಪಿಗೆ ಬಂದಿರಲೂಬಹುದು.
ಕಟ್ಟ ಸುಬ್ರಹ್ಮಣ್ಯ ನಾಯ್ಡು ರಾಜ್ಯದ ಕಾರಾಗೃಹಕ್ಕೆ ಕಳೆ ತಂದರೆ, ಸ್ಪೆಕ್ಟ್ರಂ ಹಗರಣದ ಮಾಜಿ ದೂರ ಸಂಪರ್ಕ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನ್ನಿಮೊಳಿ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದ ಹಗರಣದ ಮುಖ್ಯ ರೂವಾರಿ ಸುರೇಶ್ ಕಲ್ಮಾಡಿ ತಿಹಾರ್ ಜೈಲಿನಲ್ಲಿ ಜೈಲುಡುಗೆಯಲ್ಲಿ ಮಿಂಚುತ್ತಿದ್ದರು.
ಪುಣ್ಯಕ್ಕೆ ಕೆಲವು ರಾಜಕಾರಣಿಗಳು ಜೈಲಿಗೆ ಎಂಟ್ರಿಯಾಗುವ ಸಾಧ್ಯತೆಯಿದ್ದರೂ ಸದ್ಯ ಸ್ವತಂತ್ರವಾಗಿದ್ದಾರೆ.












Click it and Unblock the Notifications