ತಮ್ಮನ್ನು ಹರಿಶ್ಚಂದ್ರನಿಗೆ ಹೋಲಿಸಿಕೊಂಡ ಬಿಎಸ್ ಯಡಿಯೂರಪ್ಪ

ಅದೂ ಪುತ್ರ ರಾಘವೇಂದ್ರನ ಸಮ್ಮುಖದಲ್ಲಿ. ಮಧ್ಯೆ, ಬೇಳೂರು ಗೋಪಾಲಕೃಷ್ಣ ಇದಕ್ಕೆ ಸಾಕ್ಷಿಯಾಗಿದ್ದಾರೆ. (ಪಕ್ಕದ ಚಿತ್ರ ನೋಡಿ) ಅಪ್ಪಾಜಿ ಈ ಮಾತನ್ನು ಹೇಳುತ್ತಿದ್ದಂತೆ ರಾಘವೇಂದ್ರ, ಹಾವು ಕಚ್ಚಿಸಿಕೊಂಡ ಲೋಹಿತಾಶ್ವನಂತಾಗಿ ಅಮ್ಮಾ ಎಂದು ಕಿರುಲಿದ್ದಾನೆ. ಇದನ್ನು ಕೇಳಿ ರುದ್ರಭೂಮಿಯಲ್ಲಿ ಯಾರೋ ನಕ್ಕ ಸದ್ದೊಂದು ಕೇಳಿಬಂದಿದೆ.
ನಾಡಿನ ಪ್ರಜೆಗಳೇ, ಯಡಿಯೂರಪ್ಪ ಅವರ ಬಾಯಿಂದಲೇ ಈ ಪ್ರಸಂಗಾವಧಾನ ಕೇಳಿ ಪುನೀತರಾಗಿ: ಗ್ರಹಚಾರ ಎನ್ನುವುದು ಸತ್ಯ ಹರಿಶ್ಚಂದ್ರನನ್ನೂ ಬಿಟ್ಟಿಲ್ಲ. ಇನ್ನು ಯಡಿಯೂರಪ್ಪ ಯಾವ ಮಹಾ. ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇನೆ. ಶೀಘ್ರ ದೋಷಮುಕ್ತನಾಗಿ ನಿಮ್ಮ ಮುಂದೆ ಬರುತ್ತೇನೆ.
ಹೀಗೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಮಾತನ್ನಾಡಿದ್ದಾರೆ.
'ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇನೆ. ಯಾವುದಕ್ಕೂ ಬೇರೆಯವರನ್ನು ದೂರುವುದಿಲ್ಲ. ನಾನು ಸದ್ಯದಲ್ಲಿಯೇ ಆರೋಪಗಳಿಂದ ಮುಕ್ತನಾಗುವ ವಿಶ್ವಾಸವಿದೆ. ಈ ಬಗ್ಗೆ ಕಾರ್ಯಕರ್ತರು ಕಣ್ಣೀರು ಹಾಕುವ ಹಾಗೂ ವಿಚಲಿತರಾಗುವ ಅವಶ್ಯಕತೆಯಿಲ್ಲ' ಎಂದು ಸಮಾಧಾನ ಮಾಡಿದ್ದಾರೆ.
ಅಧಿಕಾರ ಇದ್ದಾಗ ಜನ ಮುತ್ತಿಕೊಳ್ಳುವುದು ಸಹಜ. ಆದರೆ ತಾವು ಅಧಿಕಾರ ಕಳೆದ ನಂತರವೂ ಜನರು ತಮ್ಮೊಂದಿಗಿದ್ದಾರೆ. ಇದರಿಂದ ತುಂಬಾ ಖುಷಿಯಾಗಿದೆ. ಇದರಿಂದಾಗಿ ತಾವು ಜನರ ಹೃದಯದಲ್ಲಿರುವ ಸಮಾಧಾನವಿದೆ ಎಂದಿದ್ದಾರೆ.
ಇದೇನು ಅಧಿಕಾರದ ಅಮಲು ಇಳಿಯುತ್ತಿದ್ದಂತೆ ನಾಡಿನ ದೊರೆ ಸಾಕ್ಷಾತ್ ಸತ್ಯ ಹರಿಶ್ಚಂದ್ರ ಆಗಿಬಿಟ್ಟರೇ ಎಂದು ನಿಮ್ಮ ಮೂಗನ್ನು ನೀವೇ ಮುರಿಯಬೇಡಿ. ಇದನ್ನು ಕೇಳಿ ಸಾಕ್ಷಾತ್ ಹರಿಶ್ಚಂದ್ರ ಸಹ ಬಿದ್ದು ಬಿದ್ದು ನಕ್ಕಿದ್ದಾನೆ. ತಿರುಗೇಟು ನೀಡಲು, ಭೊಲೋಕದ ಹರಿಶ್ಚಂದ್ರನಿಗೆ ಏನು ಹೆಸರಿಡುವುದು ಎಂದು ತಿಳಿಯದೆ ರುದ್ರಭೂಮಿಯಲ್ಲಿ ಕಣ್ಣಿರಿನಲ್ಲಿ ಕೈತೊಳೆದಿದ್ದಾನೆ ಎಂಬುದು ತಾಜಾ ಸುದ್ದಿ.












Click it and Unblock the Notifications