ಅಕ್ರಮ ಗಣಿ ವರದಿ ಆರೋಪಿಗಳು ಜೈಲು ಸೇರಲಿ: ಸಿದ್ದು

ಗಣಿ ಹಗರಣ ಕುರಿತು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಒಂದು ವರ್ಷದ ಹಿನ್ನಲೆಯಲ್ಲಿ ಬಳ್ಳಾರಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೆಸ್‌ನ ಹೋರಾಟದ ಫಲವಾಗಿ ಗಣಿ ಹಗರಣ ಬಯಲಾಗಿದೆ. ಗಣಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ನಿಟ್ಟಿನಲ್ಲಿ ಪಕ್ಷ ತನ್ನ ಹೋರಾಟವನ್ನು ಮುಂದುವರೆಸಲಿದೆ ಎಂದು ಸ್ಪಷ್ಟಪಡಿಸಿದರು.
ಬಿ.ಎಸ್. ಯಡಿಯೂರಪ್ಪ ಅವರ ಮೂರು ವರ್ಷಗಳ ಆಡಳಿತವನ್ನು ಕರ್ನಾಟಕ ರಾಜ್ಯದ 'ಕರಾಳ ಆಡಳಿತ' ಎಂದೇ ಕಾಂಗ್ರೆಸ್ ಪರಿಗಣಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತಿರುವ ಕುರಿತು ವಿ.ಎಸ್. ಉಗ್ರಪ್ಪ ನೇತೃತ್ವದ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿ ಸ್ಥಳಕ್ಕೆ ಭೇಟಿ ಮಾಡಿ ಖಚಿತಪಡಿಸಿಕೊಂಡಿದ್ದ ಮಾಹಿತಿಯನ್ನು ಲೋಕಾಯುಕ್ತರು ಕೂಡ ವರದಿಯಲ್ಲಿ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್‌ನ ಅಧ್ಯಯನದ ಸ್ಪಷ್ಟತೆಯನ್ನು ಎತ್ತಿಹಿಡಿದಿದ್ದಾರೆ ಎಂದರು.
ಜಿಲ್ಲೆಯ ಅಕ್ರಮ ಗಣಿಗಾರಿಕೆಯ ಕುರಿತು ಐದು ದಿನ ಹಗಲು - ರಾತ್ರಿ ಸದನದಲ್ಲಿ ನಡೆಸಿದ ಹೋರಾಟ, ೧೬ ದಿನಗಳ ಕಾಲ ಬೆಂಗಳೂರಿನಿಂದ ಬಳ್ಳಾರಿಗೆ ೩೧೫ ಕಿಮೀ ದೂರ ನಡೆಸಿದ ಪಾದಯಾತ್ರೆಗೆ ಫಲ ಸಿಕ್ಕಿದೆ. ಮುಖ್ಯಮಂಂತ್ರಿ ಡಿ.ವಿ. ಸದಾನಂದಗೌಡ ಅವರು ಗಣಿಹಗರಣದ ಲೋಕಾಯುಕ್ತ ವರದಿಯನ್ನು ಕೂಡಲೇ ಪುರಸ್ಕರಿಸಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಆಸ್ತಿಗಳನ್ನು, ಬ್ಯಾಂಕ್ ಖಾತೆಗಳನ್ನು ಕೂಡಲೇ ಜಪ್ತಿ ಮಾಡಿಕೊಳ್ಳಬೇಕು ಎಂದರು.
ನಮ್ಮದೇನಿದ್ದರೂ ಆಂಧ್ರದಲ್ಲಿ ಗಣಿಗಾರಿಕೆ ಇದೆ. ಕರ್ನಾಟಕದಲ್ಲಿ ನಮ್ಮ ಗಣಿಗಾರಿಕೆ ವ್ಯವಹಾರ ಇಲ್ಲ ಎನ್ನುತ್ತಿದ್ದ ಜಿ. ಜನಾರ್ದನರೆಡ್ಡಿ ಮತ್ತು ಅವರ ತಂಡ ಲೋಕಾಯುಕ್ತರ ವರದಿ ಬಹಿರಂಗ ಆದ ನಂತರ ಎಲ್ಲಿಯೂ ನಾವು ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸಿಲ್ಲ ಎಂದು ಹೇಳುತ್ತಿಲ್ಲ. ನಾವು ೨೪ಕ್ಯಾರೆಟ್ ಚಿನ್ನ, ಅಪ್ಪಟ ಪ್ರಾಮಾಣಿಕರು, ದೇವರ ಮಕ್ಕಳು, ದೇವರುಕೊಟ್ಟ ಸಂಪತ್ತು ಎಂದೆಲ್ಲಾ ಬೊಗಳೆ ಬಿಡುತ್ತಿದ್ದುದ್ದರ ಸತ್ಯಾಂಷ ಬಯಲಾಗಿದೆ ಎಂದು ವ್ಯಂಗ್ಯವಾಡಿದರು.
ಮುಕ್ತವಾದ ಬಳ್ಳಾರಿ: ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ 'ದ ರಿಪಬ್ಲಿಕ್ ಬಳ್ಳಾರಿ' ಎನ್ನುವ ಪ್ರತ್ಯೇಕ ಭಾಗವಿದೆ. ಜಿಲ್ಲೆಯಲ್ಲಿಯ ಕಾನೂನು - ಸುವ್ಯವಸ್ಥೆ, ಅಧಿಕಾರಿಗಳ ಲಂಚಗುಳಿತನ, ಅಕ್ರಮ - ಅನಧಿಕೃತ ಗಣಿಗಾರಿಕೆ ಸೇರಿ ನಡೆದ ವಿವಿಧ ಚಟುವಟಿಕೆಗಳು ಎಲ್ಲವೂ ಈ ಭಾಗದಲ್ಲಿ ದಾಖಲಾಗಿವೆ.
ಪ್ರಸ್ತುತ ರೆಡ್ಡಿಗಳಿಗೆ ಸಚಿವ ಸ್ಥಾನ ಸಿಗದ ಕಾರಣ ಬಳ್ಳಾರಿ ಅವರಿಂದ ಮುಕ್ತಗೊಂಡಿದೆ. ಬಳ್ಳಾರಿ ಪುನಃ ಕರ್ನಾಟಕಕ್ಕೆ ಸೇರಿದೆ. ಸ್ವತಂತ್ರಗೊಂಡಿದೆ. ನಿರಂಕುಶಾಧಿಪತ್ಯ ಕೊನೆಗೊಂಡಿದೆ. ವಿಮುಕ್ತಿ ಪಡೆದಿದೆ ಎಂದರು.
ಜಿಲ್ಲೆಯ ಅನೇಕರು ನಡೆಸುತ್ತಿದ್ದ ಕಾನೂನಾತ್ಮಕ ಹೋರಾಟಕ್ಕೆ ಜಯಸಿಕ್ಕಿದೆ. ಕ್ರಿಮಿನಲ್‌ಗಳನ್ನು ಸರ್ಕಾರ ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕು. ಅವರ ಆಸ್ತಿಪಾಸ್ತಿಗಳು ವರ್ಗವಾಗದಂತೆ, ಪರಭಾರೆ ಆಗದಂತೆ ಸರ್ಕಾರ ಜಪ್ತಿ ಮಾಡಬೇಕು. ತನಿಖೆಯ ನಂತರ ಅವುಗಳನ್ನು ಮುಟ್ಟುಗೊಲು ಹಾಕಿಕೊಳ್ಳಬೇಕು. ಇಲ್ಲವಾದಲ್ಲಿ ಬಳ್ಳಾರಿಯಲ್ಲಿ ಅಮಾಯಕರು, ಜನಸಾಮಾನ್ಯರು ಬದುಕುವುದೇ ದುಸ್ತರವಾಗಲಿದೆ ಎಂದರು.
ಗಣಿ ಹಗರಣದ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪಲಿದೆ. ರಾಷ್ಟ್ರೀಯ ಬಿಜೆಪಿ, ಆರ್‌ಎಸ್‌ಎಸ್ ಭ್ರಷ್ಟ ವ್ಯವಸ್ಥೆಗೆ ಬಲಿ ಆಗದೇ, ಭ್ರಷ್ಟರು ನೀಡುವ ಆಸೆ ಆಮಿಷಗಳಿಗೆ ಒಳಗಾಗದೇ ರೆಡ್ಡಿ ಸಹೋದರರಿಗೆ ಸಚಿವ ಸ್ಥಾನ ನೀಡಬಾರದು. ವಿ. ಸೋಮಣ್ಣ ಅವರನ್ನು ಸಚಿವರನ್ನಾಗಿಸಿರುವ ಕುರಿತು ಪಕ್ಷ ಚರ್ಚೆ ನಡೆಸಿ ಸೂಕ್ತ ನಿರ್ಧಾರಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ವಿ.ಎಸ್. ಉಗ್ರಪ್ಪ, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಲೋಕಾಯುಕ್ತರ ವರದಿಯನ್ನು ಪುರಸ್ಕರಿಸಿ ತಪ್ಪಿತಸ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಲೋಕಾಯುಕ್ತರ ವರದಿಯಲ್ಲಿಯ ಎಲ್ಲಾ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಕಾಂಗ್ರೆಸ್‌ನ ನಾಡ ರಕ್ಷಣೆಗಾಗಿ ನಡಿಗೆ' ಪಾದಯಾತ್ರೆಗೆ ಒಂದು ವರ್ಷದಲ್ಲಿ ಫಲ ಸಿಕ್ಕಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಇನ್ನಿತರರು ವೇದಿಕೆಯಲ್ಲಿದ್ದರು.












Click it and Unblock the Notifications