ರೆಡ್ಡಿಗಳು ನೇಪಥ್ಯಕ್ಕೆ, ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ ?

ಸೋಮವಾರ ರಾತ್ರಿ ದೆಹಲಿಗೆ ಬಂದಿಳಿದಿರುವ ರೆಡ್ಡಿಗಳು ವರಿಷ್ಠರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮಂಗಳವಾರ ರಾತ್ರಿ ಬಿಜೆಪಿ ಅಧ್ಯಕ್ಷ ಗಡ್ಕರಿ ಮನೆಯಲ್ಲಿ ಒಂದು ಕಾಲುಗಂಟೆ ನಡೆದ ಸಭೆಯಲ್ಲಿ ಹಿರಿಯ ಮುಖಂಡ ಅರುಣ್ ಜೇಟ್ಲಿ, ಮುಖ್ಯಮಂತ್ರಿ ಸದಾನಂದಗೌಡ, ಉನ್ನತ ಶಿಕ್ಷಣ ಸಚಿವ ವಿಎಸ್ ಆಚಾರ್ಯ, ಧಮೇಂದ್ರ ಪ್ರಧಾನ್ ಸಭೆಯಲ್ಲಿ ಭಾಗವಹಿಸಿದ್ದರು.
'ಲೋಕಾಯುಕ್ತ ವರದಿಯಲ್ಲಿ ನಿಮ್ಮ ಹೆಸರು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಗುರುತರ ಆರೋಪ ಮಾಡಲಾಗಿದೆ. ಇದರಿಂದ ಮುಕ್ತಿ ಪಡೆದು ಬನ್ನಿ. ಆಮೇಲೆ ಸಚಿವ ಸ್ಥಾನ ಕೊಡೋಣ' ಎಂದು ವರಿಷ್ಠರು ಖಡಾಖಂಡಿತವಾಗಿ ಹೇಳಿದ್ದಾರೆ. ಇದಕ್ಕೆ ಇಬ್ಬರು ಸಹೋದರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮಶೇಖರ ರೆಡ್ಡಿಗೆ ಸಚಿವ ಸ್ಥಾನ?: ಈ ಮಧ್ಯೆ, ಬದಲಿ ವ್ಯವಸ್ಥೆಗೆ ವರಿಷ್ಠರು ಸಲಹೆ ನೀಡಿದ್ದು 'ನಿಮ್ಮ ಕಿರಿಯ ಸಹೋದರ ಸೋಮಶೇಖರ ರೆಡ್ಡಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಸಿದ್ಧ. ಹಾಗೆಯೇ, ಬಳ್ಳಾರಿ ಜಿಲ್ಲೆಗೆ ಹೆಚ್ಚು ಪ್ರಾತಿನಿಧ್ಯ ಕೊಡಲು ಬದ್ಧ. ಬೇರೆ ಹೆಸರುಗಳನ್ನು ಕೊಡಿ' ಎಂದೂ ವರಿಷ್ಠರು ಹೇಳಿದ್ದಾರೆ. ಸೋಮಶೇಖರ ರೆಡ್ಡಿ ಪ್ರಸ್ತುತ ಕರ್ನಾಟಕ ಹಾಲು ಮಹಾಮಂಡಳದ (KMF) ಅಧ್ಯಕ್ಷರಾಗಿದ್ದಾರೆ.
ಸೋಮವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಗದೀಶ್ ಶೆಟ್ಟರ್ ಉಪ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಉಪ ಮುಖ್ಯಮಂತ್ರಿ ಸ್ಥಾನ ಸೂಚಿಸಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ. ಅಲ್ಲದೆ, ಹಣಕಾಸು ಖಾತೆಯನ್ನು ತಾವೇ ಇಟ್ಟುಕೊಳ್ಳುವಂತೆಯೂ ವರಿಷ್ಠರು ಮುಖ್ಯಮಂತ್ರಿಗೆ ಹೇಳಿದ್ದಾರೆ ಎನ್ನಲಾಗಿದೆ.












Click it and Unblock the Notifications