ಯಡಿಯೂರಪ್ಪರಿಂದ ದೂರವಿರಿ: ಡಿವಿಎಸ್ ಗೆ 'ಅಡ್ಡವಾಣಿ' ಸಂದೇಶ

ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಅಧಿಕಾರ ಹಂಚಿಕೆ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿದ್ದರೂ ಭವಿಷ್ಯದಲ್ಲಿ ಎದುರಾಗುವ ಗಂಡಾಂತರವನ್ನು ತಡೆಗಟ್ಟಲು ಅಧಿಕಾರ ಕೇಂದ್ರದಿಂದ ಬಿ.ಎಸ್. ಯಡಿಯೂರಪ್ಪರನ್ನು ದೂರ ಇಡುವಂತೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ವರಿಷ್ಠರು, ಮುಖ್ಯಮಂತ್ರಿ ಡಿವಿಎಸ್ ಗೆ ಕಿವಿ ಮಾತು ಹೇಳಿದ್ದಾರೆ.
ಸಂಸತ್ ಭವನದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಜತೆ ಮಂಗಳವಾರ ಸಂಜೆ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು. ಮೂರನೆಯವರ ಪ್ರವೇಶವಿಲ್ಲದೆ ನಡೆದ 'ನೇರ ಮುಖಾಮುಖಿ'ಯಲ್ಲಿ ಅಡ್ವಾಣಿ ರಾಜ್ಯದಲ್ಲಿ ಕುಂದಿರುವ ಬಿಜೆಪಿ ವರ್ಚಸ್ಸನ್ನು ಹೆಚ್ಚಿಸಲು ಸೂಚಿಸಿದರು. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡುವಂತೆ ಹೇಳಿದರು ಎಂದು ಮೂಲಗಳು ವಿವರಿಸಿವೆ. ಅಡ್ವಾಣಿ ಭೇಟಿಯ ನಂತರ ಅಲ್ಲೇ ಸಂಸತ್ ಭವನದಲ್ಲೇ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರನ್ನೂ ಡಿವಿಎಸ್ ಭೇಟಿಯಾದರು.
ರಾಜ್ಯ ಬಿಜೆಪಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ವ್ಯಕ್ತಿ ಕೇಂದ್ರಿತ ಪಕ್ಷವಾಗಿ ಬೆಳೆದಿದ್ದು, ಈ ಅಂಶವೇ ಪಕ್ಷದ ಪಾಲಿಗೆ ಮಾರಕವಾಗಿ ಪರಿಣಮಿಸಲಿದೆ. ಇದನ್ನು ನಿವಾರಿಸಿಕೊಳ್ಳುವುದೇ ನಿಮ್ಮ ಗುರಿ ಆಗಲಿ ಎಂದು ಲಾಲ್‌ಕೃಷ್ಣ ಅಡ್ವಾಣಿ ಅವರು ಗೌಡರಿಗೆ ಸಲಹೆ ನೀಡಿದ್ದಾರೆ.
ನೀವೀಗ ಬಿ.ಎಸ್. ಯಡಿಯೂರಪ್ಪನವರ ಕೈಗೊಂಬೆ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದ್ದು, ಇಂತಹ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ನೀವು ಬೆಳೆಯಬೇಕು. ಯಡಿಯೂರಪ್ಪನವರ ಕೈಗೊಂಬೆ ಎಂಬ ಭಾವನೆಯನ್ನು ತೊಡೆದು ಹಾಕುವಂತೆ ಆಡಳಿತ ನಡೆಸಬೇಕು. ಇವತ್ತು ಮೊದಲ ಕಂತಿನ ಸಂಪುಟ ರಚನೆ ಕಾರ್ಯ ನಡೆದ ರೀತಿಯೂ ನೀವು ಯಡಿಯೂರಪ್ಪ ಅವರ ಕೈಗೊಂಬೆ ಎನ್ನುವ ಅನುಮಾನವನ್ನೇ ಹುಟ್ಟು ಹಾಕಿದೆ. ಈ ಅನುಮಾನವನ್ನು ತೊಡೆದು ಹಾಕುವಂತೆ ನೀವು ನಡೆದುಕೊಳ್ಳದಿದ್ದರೆ ರಾಜ್ಯದಲ್ಲಿ ಬಿಜೆಪಿಯು ಜನ ಸಮುದಾಯಗಳ ಪಕ್ಷವಾಗುವ ಬದಲು ಕೇವಲ ವ್ಯಕ್ತಿನಿಷ್ಠ ಪಕ್ಷವಾಗುತ್ತದೆ. ಯಾವ ಕಾರಣಕ್ಕೂ ಇದಕ್ಕೆ ಅವಕಾಶ ನೀಡಕೂಡದು ಎಂದು ಅವರು ಕಿವಿ ಮಾತು ಹೇಳಿದರು.
ಆದಷ್ಟು ಬೇಗ ನೀವು ಯಡಿಯೂರಪ್ಪ ಅವರ ಹಿಡಿತದಿಂದ ಹೊರಬನ್ನಿ. ರಾಜ್ಯದ ಎಲ್ಲ ಜಾತಿ, ವರ್ಗಗಳ ವಿಶ್ವಾಸಗಳಿಸುವ ರೀತಿಯಲ್ಲಿ ಕೆಲಸ ಮಾಡಿ, ಅಭಿವದ್ಧಿಯ ಮೂಲಕ ನಿಮ್ಮ ಶಕ್ತಿಯನ್ನು ತೋರಿಸಿ ಎಂದು ಅಡ್ವಾಣೆ ಸಲಹೆ ನೀಡಿದ್ದು, ಈ ಬೆಳವಣಿಗೆ ಬಿಜೆಪಿ ಪಾಳೆಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.












Click it and Unblock the Notifications