ಬೇಳೂರು ಗೋಪಾಲನಿಗೆ ಮಂತ್ರಿ ಕಿರೀಟದ ಕನಸು

ಮಾರಿಷಸ್ ನಿಂದ ಯಡಿಯೂರಪ್ಪ ಬಿಐಎಎಲ್ ನಿಲ್ದಾಣದಲ್ಲಿ ಬಂದಿಳಿದಾಗ ಬೆನ್ನ ಹಿಂದೆ ನಿಂತು ಹಲ್ಲುಗಿಂಜಿದ ಗೋಪಾಲಕೃಷ್ಣ ಈಗ ಸದಾನಂದ ಗೌಡರ ಪರ ಓಟು ಹಾಕಿದ್ದಾರೆ.
ಯಡ್ಡಿ ಪರವಾಗಿ ಬೇಳೂರು ಹೇಳಿಕೆ ನೀಡುತ್ತಲೇ ಬಂದಿದ್ದು, ಶಿವಮೊಗ್ಗ ಕಡೆಯಿಂದ ಮಂತ್ರಿ ಸ್ಥಾನದ ಆಸೆ ಹೊತ್ತಿರುವ ಶಾಸಕರಿಗಿಂತ ಒಂದು ಕೈ ಹೆಚ್ಚಿಗೆ ಲಾಬಿ ನಡೆಸಿದ್ದಾರೆ.
ಇನ್ನೂ ಮಂತ್ರಿ ಸ್ಥಾನದ ಆಸೆ ಇಟ್ಟುಕೊಂಡಿರುವ ಹರತಾಳು ಹಾಲಪ್ಪ, ಶೋಭಾ ಮೇಡಂ ಆಪ್ತೆ ಭಾರತಿ ಶೆಟ್ಟಿ, ಕೆಜಿ ಕುಮಾರಸ್ವಾಮಿ, ವಿ ಕೃಷ್ಣ ಭಟ್ ರೇಸ್ ನಲ್ಲಿದ್ದಾರೆ.
ಭಾರತಿ ಶೆಟ್ಟಿ ಕೂಡ ವಿಧಾನ ಪರಿಷತ್ತು ಸದಸ್ಯೆ. ಜಿಲ್ಲೆಯಲ್ಲಿ ಮಹಿಳಾ ನಾಯಕತ್ವ ಬೆಳೆಸಬೇಕೆಂಬ ನಿರ್ಧಾರಕ್ಕೆ ಕಟ್ಟುಬಿದ್ದರೆ ಬೇಳೂರಿಗೆ ಕಷ್ಟ. ಇನ್ನು ಪಕ್ಷ ನಿಷ್ಠ ಕೆ ಜಿ ಕುಮಾರಸ್ವಾಮಿ, ಆರ್‌ಎಸ್‌ಎಸ್ ಬೆಂಬಲಿತ ಕೃಷ್ಣ ಭಟ್ ಎರಡನೇ ಸಾಲಿನಲ್ಲಿ ಕಾದು ಕೂತಿದ್ದಾರೆ.
ಈಶ್ವರಪ್ಪನವರು ಬಿಜೆಪಿ ರಾಜ್ಯಾಧ್ಯಕರಾಗಿರುವುದರಿಂದ ಮಂತ್ರಿ ಸ್ಥಾನಕ್ಕೆ ಮತ್ತೆ ಮರಳುವುದು ಅನುಮಾನ. ಜಾತಿ ಲೆಕ್ಕಾಚಾರ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಪ್ರಾಬಲ್ಯ ಮುಂದುವರಿಕೆ ಲೆಕ್ಕಾಚಾರದಂತೆ ಬೇಳೂರು ಮಂತ್ರಿಯಾದರೂ ಅಚ್ಚರಿಯೇನಿಲ್ಲ.
ಆದರೆ, ರೇಣುಕಾಚಾರ್ಯ ಅವರ ಸ್ಥಾನವೇ ಅಲ್ಲಾಡುತ್ತಿರುವಾಗ ಈ ಹಿಂದೆ ಬಂಡಾಯ ಹೂಡಿದ್ದ ಬೇಳೂರು ಬೇಳೂರನ್ನು ಮೇಲಕ್ಕೆತ್ತುವುದು ಅನುಮಾನ. ಯಾವುದಕ್ಕೂ ಕಾದು ನೋಡೋಣ.












Click it and Unblock the Notifications