ಕೇಂದ್ರವನ್ನು ಕನ್ನಡದಲ್ಲಿ ತರಾಟೆ ತೆಗೆದ ಚೆಲುವ

ಬೆಲೆ ಏರಿಕೆಯ ನಿರ್ಣಯದ ಮೇಲೆ ಆದ ಚರ್ಚೆಯಲ್ಲಿ, ನರೇಗ ಯೋಜನೆಯಿಂದಾಗಿ ಸಂಪತ್ತು ನಿರ್ಮಾಣವಾಗುತ್ತಿಲ್ಲ ಮತ್ತು ಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರೈತರು ಕೈಚಾಚುವ ಪ್ರವೃತ್ತಿಯವರಲ್ಲವಾದರೂ ಅವರಿಗೆ ಅಗತ್ಯವಾದ ಸರಿಯಾದ ರೀತಿಯಲ್ಲಿ ವಿದ್ಯುತ್ ಸಿಗಬೇಕು ಮತ್ತು ಅವರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದರು.
1967ರಲ್ಲಿ ಲೋಕಸಭೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ.ಎಚ್. ಪಟೇಲ್ ರವರು ಭಾಷಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.
ಲೋಕಸಭೆ ಕಲಾಪಗಳಿಗೆ ಹಿಂದಿ/ಇಂಗ್ಲಿಷ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಭಾ ಸದಸ್ಯರು ಕಲಾಪಗಳಿಗೇ ಹೋಗುವುದಿಲ್ಲ. ಹೋದರೂ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ತಮ್ಮ ಮಾತೃ ಭಾಷೆಯಲ್ಲಿ ಭಾಷಣ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದರೂ ಹಲವಾರು ಜನ ಸದಸ್ಯರು ತಮ್ಮ ಭಾಷೆಯನ್ನು ಬಳಸದಿರುವುದು ದುರಂತವೇ.
ನಿಜಕ್ಕೂ ಅವರು ತಮ್ಮ ಭಾಷೆಯನ್ನು ಬಳಸಿದ್ದೇ ಆದಲ್ಲಿ ವಿಷಯವನ್ನು ಅತ್ಯಂತ ನೇರ ಮತ್ತು ನಿಖರವಾಗಿ ಹೇಳಬಹುದಲ್ಲವೆ? ಇಷ್ಟು ಮಾತ್ರವಲ್ಲ, ನಾವೇ ಆರಿಸಿ ಕಳಿಸಿದ ಜನಪ್ರತಿನಿಧಿಗಳು ಅಲ್ಲಿ ಏನು ಮಾತನಾಡುತ್ತಾರೆ ಎಂಬುದನ್ನು ತಿಳಿಯಲು ಜನರಿಗೆ ಅನುವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಭಾಷೆಯನ್ನು ಬರಿ ಪ್ರಮಾಣ ವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಭಾಷೆಯನ್ನು ಬಳಸುವಂತಾದಾಗ ಮಾತ್ರ ಅದರ ಲಾಭ ಸಿಗಲು ಸಾಧ್ಯ.
ನಿನ್ನೆಯ ಚಲುವರಾಯ ಸ್ವಾಮಿಯವರ ಕನ್ನಡ ಭಾಷಣ ಎಲ್ಲಾ ಲೋಕಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಭೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಷಯಗಳ ಚರ್ಚೆ ನಮ್ಮ ಭಾಷೆಯಲ್ಲೇ ನಡೆಯಲಿ.
ಮುಖ್ಯವಾಗಿ ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗೃತಿಯಿಂದಲೇ. ಕನ್ನಡಿಗ ತನ್ನ ಭಾಷೆಯ ಬಗ್ಗೆ ಜಾಗೃತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಭಾಷಣ ಮಾಡುವಂತಾಗುತ್ತಾರೆ. ಜೈ ಭುವನೇಶ್ವರಿ.












Click it and Unblock the Notifications