ಕಳ್ಳರೆಂದು 9 ಅಪರಿಚಿತರನ್ನು ಕೊಂದ ಗ್ರಾಮಸ್ಥರು

ಇಂದು ಮಧ್ಯಾಹ್ನ ಬಚ್ಚವಾರಿಪಲ್ಲಿ ಗ್ರಾಮದ ಹೊರವಲಯದಲ್ಲಿ ಅಪರಿಚಿತರ ಗುಂಪು ಟಾಟಾ ಸೂಮೋ ವಾಹನ ನಿಲ್ಲಿಸಿಕೊಂಡು ಹಣ ಹಂಚಿಕೊಳ್ಳುತ್ತಿರುವುದನ್ನು ಗ್ರಾಮಸ್ಥರು ನೊಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಕಳ್ಳರು ಇರಬೇಕೆಂದು ಭಾವಿಸಿ ಮನೆಗಳಲ್ಲಿದ್ದ ದೊಣ್ಣೆ ಮಚ್ಚುಗಳನ್ನು ತಂದು ಅಟ್ಟಾಡಿಸಿಕೊಂಡು ಬಡಿಯಲು ಶುರುಮಾಡಿದ್ದಾರೆ.
ಟಾಟಾ ಸುಮೋ ಬಿಟ್ಟು ಅಪರಿಚಿತರು ಓಡಿ ಹೋಗುವ ಪ್ರಯತ್ನ ಮಾಡಿದ್ದಾರಾದರೂ ಸಾದ್ಯವಾಗಿಲ್ಲ. ಅವರಲ್ಲಿ ಮೂವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಹಾಗು ಬೆಂಗಳೂರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅವರು ಕೂಡ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.
ಇಂತಹುದೆ ಇನ್ನೊಂದು ಪ್ರಕರಣ ಮಂಗಳವಾರವೆ ಯರ್ರಕೋಟೆ ಗ್ರಾಮದಲ್ಲೂ ನಡೆದಿದೆ. ಅಲ್ಲಿ ಸಹ ಟಾಟಾ ಸುಮೋ ವಾಹನದಲ್ಲಿ ಕುಳತಿದ್ದ ಅಪರಿಚಿತರನ್ನು ಕಂಡ ನೂರಾರು ಮಂದಿ ಗ್ರಾಮಸ್ಥರು ಕೈಗೆ ಸಿಕ್ಕಿದ ಕಲ್ಲು, ದೊಣ್ಣೆ, ಮಚ್ಚು ತಂದು ದಾರುಣವಾಗಿ ಬಡಿಯಲು ಶುರುಮಾಡಿದ್ದಾರೆ. ಆರು ಮಂದಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಅವರು ತಂದಿದ್ದ ಟಾಟಾ ಸುಮೊ ವಾಹನ ಕೆಎ 02/ಪಿ 4579ವನ್ನು ಆಕ್ರೋಶಗೊಂಡ ಗ್ರಾಮಸ್ಥರು ಸುಟ್ಟುಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರಾದರೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಇದ್ದ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ. ಬತ್ಲಹಳ್ಳಿಗ್ರಾಮಾಂತರ ಹಾಗು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಹಿನ್ನೆಲೆ : ಓರಿಸ್ಸಾ ಗಡಿಯಲ್ಲಿರುವ ಆಂಧ್ರ ಮೂಲದ ಕಳ್ಳರು ಜಿಲ್ಲೆಯನ್ನು ಹೊಕ್ಕಿದ್ದು ಒಂಟಿಯಾಗಿ ಸಿಕ್ಕ ಜನರನ್ನು ದೋಚುತ್ತಿದ್ದಾರೆ ಎಂಬ ಸುದ್ದಿಯೇ ಈ ಎರಡು ಘಟನೆಗಳಿಗೆ ಕಾರಣ. ಅಲ್ಲಿ ಸರ್ಕಸ್ ಮುಚ್ಚಿದ್ದರಿಂದ ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದು ಕಳ್ಳತನಕ್ಕೆ ಇಳಿದಿದ್ದಾರೆ ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ. ಅಪರಿಚಿತರು ಹಣ ಎಣಿಸುತ್ತಿದ್ದರಿಂದ ಸಂದೇಹಗೊಂಡ ಗ್ರಾಮಸ್ಥರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.












Click it and Unblock the Notifications