ಓಎಂಸಿ ನಿರ್ದೇಶಕ ಕರುಣಾಕರ ರೆಡ್ಡಿಗೆ ದಾಖಲೆಯ ಮುಖಭಂಗ

ದಾಖಲೆಗಳ ಆಧಾರವಿಲ್ಲದೇ ಅನಗತ್ಯವಾಗಿ ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದ ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ನಿಜಕ್ಕೂ ಪೀಕಲಾಟಕ್ಕೆ ಸಿಲುಕಿದ್ದಾರೆ. ಶುಕ್ರವಾರದವರೆಗೂ ಅವರು ಓಬಳಾಪುರಂ ಮೈನಿಂಗ್ ಕಂಪನಿ ನಿರ್ದೇಶಕರ ಹುದ್ದೆಯಲ್ಲಿದ್ದರು ಎಂಬುದಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ದಾಖಲೆ ಒದಗಿಸಿ, ರೆಡ್ಡಿಗಳನ್ನು ಪೇಚಿಗೆ ಸಿಲುಕಿಸಿದೆ.
'ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ರಾಜ್ಯದಿಂದ ಅಕ್ರಮವಾಗಿ ಅದಿರು ಸಾಗಿಸಿ, ವಿದೇಶಗಳಿಗೆ ರಫ್ತು ಮಾಡಿದೆ. ರಫ್ತು ಸಮಯದಲ್ಲಿ ತೆರಿಗೆ ವಂಚನೆಯೂ ನಡೆದಿದೆ. ಕಂಪನಿಯ ನಿರ್ದೇಶಕರಾಗಿರುವ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು' ಎಂದು ಅಕ್ರಮ ಗಣಿಗಾರಿಕೆ ವರದಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಶಿಫಾರಸು ಮಾಡಿದ್ದರು.
ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕರುಣಾರೆಡ್ಡಿ ಶುಕ್ರವಾರವೇ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. 'ಓಎಂಸಿ ನಿರ್ದೇಶಕ ಸ್ಥಾನಕ್ಕೆ ನಾನು 2004ರಲ್ಲೇ ರಾಜೀನಾಮೆ ನೀಡಿದ್ದೆ. ಆಗಿನಿಂದಲೇ ಕಂಪನಿಯ ವ್ಯವಹಾರಗಳಿಂದ ದೂರ ಉಳಿದಿದ್ದೇನೆ. ಲೋಕಾಯುಕ್ತರು ದಾಖಲೆಗಳ ಆಧಾರವಿಲ್ಲದೇ ನನ್ನ ಹೆಸರನ್ನು ವರದಿಯಲ್ಲಿ ಸೇರಿಸಿದ್ದಾರೆ' ಎಂದು ದೂರು ನೀಡಿದ್ದರು.
ಜತೆಗೆ, ವರದಿಯಿಂದ ತಮ್ಮ ಹೆಸರನ್ನು ಕೈಬಿಡುವಂತೆ ಸಚಿವರು ರಾಜ್ಯಪಾಲ ಭಾರದ್ವಾಜ್ ಅವರಿಗೆ ಮನವಿ ಮಾಡಿದ್ದರು. 'ಲೋಕಾಯುಕ್ತರು ವಾಸ್ತವವನ್ನು ಮರೆಮಾಚಿ, ಸತ್ಯಕ್ಕೆ ದೂರವಾದ ವರದಿ ನೀಡಿದ್ದಾರೆ. ಇದಕ್ಕಾಗಿ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿದ್ದರು.
ಇದೀಗ, ಲೋಕಾಯುಕ್ತರ ಪತ್ರಕ್ಕೆ ಪ್ರತಿಕ್ರಿಯಿಸಿರುವ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ), ತನ್ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ ಕರುಣಾಕರ ರೆಡ್ಡಿ ಶುಕ್ರವಾರವೂ ಓಎಂಸಿ ನಿರ್ದೇಶಕರ ಹುದ್ದೆಯಲ್ಲಿದ್ದಾರೆ ಎಂಬ ಉತ್ತರ ನೀಡಿದೆ. ಈ ಸಂಬಂಧ ಕೆಲವು ದಾಖಲೆಗಳನ್ನೂ ಲೋಕಾಯುಕ್ತರಿಗೆ ಕಳುಹಿಸಿಕೊಟ್ಟಿದೆ.












Click it and Unblock the Notifications