ಹಂಗಾಮಿ ಸಿಎಂ ಯಡಿಯೂರಪ್ಪ ಪ್ರಥಮ ಭಾಷಣ ಸಾರಾಂಶ

ಪಕ್ಷದ ಹೈಕಮಾಂಡ್ ಸೂಚನೆಗೆ ಮೇರೆಗೆ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಮ್ಮ ನಾಡಿನಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಹಾಗಾಗಿ ನಾನು ಮಾಧ್ಯಮ ಮಿತ್ರರನ್ನು ಭೇಟಿ ಮಾಡಲಿಲ್ಲ. ರಾಜೀನಾಮೆ ಪತ್ರವನ್ನು ಭರವಸೆ ನೀಡಿದಂತೆ ಶ್ರಾವಣದ ಮೊದಲ ದಿನದಂದು ಸಲ್ಲಿಸಿದ್ದೇನೆ.
ಶಿಕಾರಿಪುರದ ಪುರಸದಸ್ಯನಾಗಿ, ಉಪಮುಖ್ಯಮಂತ್ರಿ ಯಾಗಿ ನಂತರ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿದ್ದೇನೆ. ಇದಕ್ಕೆ ರಾಜ್ಯದ ಜನತೆಗೆ ಆಭಾರಿಯಾಗಿದ್ದೇನೆ. ರಾಜ್ಯದ ಐದೂವರೆ ಕೋಟಿ ಜನರ ಆಶೀರ್ವಾದದಿಂದ ಇಷ್ಟು ದಿನ ಈ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.
ನನ್ನ ಉತ್ತರಾಧಿಕಾರಿಗೂ ಬಿಜೆಪಿ ನಾಯಕರು ಸಕಲ ಸಹಾಯ ಬೆಂಬಲ ನೀಡುತ್ತಾರೆ ಎಂದು ನಂಬುತ್ತೇನೆ. ನನ್ನ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದೇನೆ.
ಬೆನ್ನುತಟ್ಟಿಕೊಂಡ ಯಡ್ಡಿ: ಕಡಿಮೆ ಬಡ್ಡಿದರದಂತೆ ರೈತರಿಗೆ ಸಾಲ ನೀಡಿಕೆ, ಹಿರಿಯ ನಾಗರೀಕರಿಗೆ ಸೌಲಭ್ಯ, ಭಾಗ್ಯಲಕ್ಷ್ಮಿ ಯೋಜನೆ, ಬೈಸಿಕಲ್ ವಿತರಣೆ, ಪ್ರಪ್ರಥಮ ಕೃಷಿ ಬಜೆಟ್, ಆರ್ಥಿಕ ಸುಭದ್ರತೆ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ, ಬೆಳಗಾವಿ ಸುವರ್ಣ ವಿಧಾನಸೌಧ ನಿರ್ಮಾಣ, 50 ವರ್ಷ ಮೀರಿದ ಅವಿವಾಹಿತ ಮಹಿಳೆಯರಿಗೆ ಸಾವಿರ ರೂ ಮಾಸಾಶಾನ ಮುಂತಾದ ಪ್ರಗತಿ ಪರ ಯೋಜನೆಗಳನ್ನು ಮುಂಬರುವ ದಿನಗಳಲ್ಲೂ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಆಶಯವಿದೆ.
ರಾಜ್ಯದ ಗಣಿ ನೀತಿಗೆ ಸುಪ್ರೀಂಕೋರ್ಟ್ ಕೂಡಾ ಮೆಚ್ಚುಗೆ ಸೂಚಿಸಿದೆ. ಅದಿರು ರಫ್ತು ನಿಷೇಧ ಮಾಡಿದ ಮೊದಲ ರಾಜ್ಯ ನಮ್ಮದು, ನೈಸರ್ಗಿಕ ಸಂಪತ್ತು ಸಂರಕ್ಷಣೆ ಮಾಡಿದರೂ ನನ್ನ ಮೇಲೆ ಅನಗತ್ಯವಾಗಿ ಆರೋಪ ಹೊರೆಸಲಾಗಿದೆ. ವಿಪಕ್ಷಗಳ ನಿರಂತರ ಕಿರುಕುಳದ ನಡುವೆಯೂ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಮೂರು ವರ್ಷಗಳ ಕಾಲ ಸಮರ್ಥವಾಗಿ ನಡೆಸಿದ್ದೇನೆ.
ನಾನು ಪಕ್ಷದಿಂದ ಹಿಂದೆ ಸರಿಯುವುದಿಲ್ಲ. ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳುತ್ತೇನೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನು ಮಾಡಲು ಶ್ರಮಿಸುತ್ತೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ ಎಂದು ತಮ್ಮ ಎಂದಿನ ವಿಜಯದ ಸಂಕೇತ ತೋರಿ ಸುದ್ದಿಗೋಷ್ಠಿಯನ್ನು ಮುಗಿಸಿದರು.












Click it and Unblock the Notifications