ಕೆಲವೇ ಕ್ಷಣಗಳಲ್ಲಿ ರಾಜೀನಾಮೆ; ನಾಳೆಯಿಂದಲೇ ರಾಜ್ಯ ಪ್ರವಾಸ

'ನಗುನಗುತ್ತಲೇ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ಸರಕಾರಿ ಕಾರನ್ನು ಅಲ್ಲೇ ಬಿಟ್ಟು ಖಾಸಗಿ ಕಾರಿನಲ್ಲಿ ಮನೆಗೆ ಹೋಗುವೆ. ಇದರಿಂದ ಪ್ರತಿಪಕ್ಷದವರಿಗೆ ಸಮಾಧಾನ ಆಗಬಹುದು' ಎಂದು ಯಡಿಯೂರಪ್ಪ ಅವರು ಗದ್ಗದಿತರಾಗಿ ಮಾತನಾಡಿದರು.
'ಈಗ ಸ್ವತಂತ್ರವಾಗಿದ್ದೇನೆ. ವಿಧಾನಸೌಧದಲ್ಲಿ ಕಟ್ಟಿಹಾಕಿದಂತಿತ್ತು. ಇನ್ನು ಜನತೆಯ ಬಳಿಗೆ ಹೋಗುತ್ತೇನೆ. ಸೋಮವಾರದಿಂದಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವೆ' ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಕಬ್ಬಿಣದ ಅದಿರು ರಫ್ತು ಸ್ಥಗಿತಗೊಳಿಸಿ ಸುಪ್ರೀಂ ಕೋರ್ಟ್ ಮೊನ್ನೆ ನೀಡಿರುವ ಆದೇಶ ತಮಗೆ ಸಂದ ಜಯ. ಈ ಹಿಂದೆಯೇ ನಾನು ಅದಿರು ರಫ್ತು ನಿಷೇಧಿಸಿದ್ದೇನೆ ಎಂದು ಹೇಳಿದರು.
ರಾಜ್ಯ ಬಲಿಜ ಸಂಘವು ತಮಗೆ ನಗರದ ಅರಮನೆ ಮೈದಾನದಲ್ಲಿ ಭಾನುವಾರ (ಜುಲೈ 31) ಮಧ್ಯಾಹ್ನ 1 ಗಂಟೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಮಾತುಗಳನ್ನು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಲಿಜ ಸಂಘವು ಸನ್ಮಾನಿಸಿತು. ಮೈಸೂರು ಪೇಟ ತೊಡಿಸಿ, ಭಾರಿ ಗುಲಾಬಿ ಹಾರ, ಶಾಲು, ಸ್ಮರಣಿಕೆ ನೀಡಿ ಸಂಘವು ಗೌರವಿಸಿತು. ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಸಂಸದರಾದ ವೆಂಕಯ್ಯನಾಯ್ಡು, ಪಿಸಿ ಮೋಹನ್, ಹಿರಿಯ ನಟಿ ಜಯಂತಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.












Click it and Unblock the Notifications