ಸಂತೋಷ ಹೆಗ್ಡೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಸನ್ಮಾನ್ಯ ಲೋಕಾಯುಕ್ತರ ಬಗ್ಗೆ ಅಪಾರವಾದ ಗೌರವವಿದೆ. ಆದರೆ, ಅಕ್ರಮ ಗಣಿಗಾರಿಕೆ ವರದಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣ ಮತ್ತು ಧರಂ ಸಿಂಗ್ ಅವರ ಹೆಸರನ್ನು ಬಿಟ್ಟಿದ್ಯಾಕೆ? ಎಂದು ಪ್ರಶ್ನಿಸಿರುವ ರೇಣುಕಾಚಾರ್ಯ, ಈ ಪ್ರಶ್ನೆಗಳಿಗೆ ಲೋಕಾಯುಕ್ತ ಸ್ಪಷ್ಟ ಉತ್ತರ ಕೊಟ್ಟು ಅವರ ಬಗ್ಗೆ ಇರುವ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ಅತ್ಯಂತ ಗೌಪ್ಯವಾಗಿ ನೀಡಬೇಕಾಗಿದ್ದ ವರದಿಯನ್ನು ಅವಧಿಗೆ ಮುನ್ನವೆ ಬಹಿರಂಗ ಮಾಡಿದ್ಯಾಕೆ? ಸೋರಿಕೆ ಮಾಡಿದವರ ಮಾಹಿತಿ ನಮ್ಮ ಬಳಿಯಿದೆ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಹಿರಂಗ ಮಾಡುತ್ತೇವೆ ಎಂದು ರೇಣುಕಾಚಾರ್ಯ ವರದಿಗಾರರಿಗೆ ತಿಳಿಸಿದರು.
ಮಧ್ಯಂತರ ವರದಿಯಲ್ಲಿ 2002ರಿಂದ ತನಿಖೆ ಮಾಡಿದ್ದಾಗಿ ತಿಳಿಸಿದ್ದರು. ಆದರೆ, ಅಂತಿಮ ವರದಿಯಲ್ಲಿ 2006ರಿಂದ ನಡೆಸಲಾದ ಗಣಿಗಾರಿಕೆಯ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಆದರೆ, ಉದ್ದೇಶಪೂರ್ವಕವಾಗಿಯೇ ಕೃಷ್ಣ ಮತ್ತು ಧರಂ ಹೆಸರು ಕೈಬಿಡಲಾಗಿದೆ ಮತ್ತು ದುರುದ್ದೇಶಪೂರ್ವಕವಾಗಿ ಯಡಿಯೂರಪ್ಪ ಹೆಸರನ್ನು ಸೇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ವರದಿಯಲ್ಲಿ ಪ್ರಸ್ತಾಪಿಸಿದಂತೆ ಅವರಿಗೆ ಸಂದಾಯವಾಗಿರುವ ಹಣ ದೇಣಿಗೆ ನೀಡಿದ್ದು. ದೇಣಿಗೆ ನೀಡಿದವರಿಗೆ ಗಣಿ ಗುತ್ತಿಗೆಯನ್ನೂ ನೀಡಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಯಡಿಯೂರಪ್ಪ ಅವರ ಉತ್ತಮ ಆಡಳಿತವನ್ನು ಸಹಿಸಲಾರದೆ ಅವರ ಹೆಸರು ಸೇರಿಸಲಾಗಿದೆ. ಇದರ ಹಿಂದೆ ಷಡ್ಯಂತ್ರ ಇದೆ ಎಂದು ನುಡಿದರು.












Click it and Unblock the Notifications