ಸಚಿವೆ ಶೋಭಾ ಕರಂದ್ಲಾಜೆಗೆ ಅಸಾಧ್ಯ ಗ್ಯಾಸ್ ಟ್ರಬಲ್

ಇಂಧನ, ಆಹಾರ ನಾಗರಿಕ ಪೂರೈಕೆ ಇಲಾಖೆ ಗಳ ವೈಫಲ್ಯವನ್ನು ಮುಚ್ಚಿಟ್ಟುಕೊಂಡ ಸಚಿವೆ ಶೋಭಾ,20 ಲಕ್ಷ ಅಕ್ರಮ ಎಲ್ ಪಿಜಿ ಸಂಪರ್ಕ, ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳುತ್ತಾ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ನೀಡಿರುವ ಸಬ್ಸಿಡಿಯನ್ನು ಬಳಸಿಕೊಂಡು ಸಮರ್ಪಕವಾಗಿ ಸಿಲಿಂಡರ್ ವಿತರಿಸುವುದು ಹಾಗೂ ಅಕ್ರಮ ತಡೆಯುವುದನ್ನು ಇಲಾಖೆ ಸರಿಯಾಗಿ ಮಾಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ್ ಪೂಜಾರಿ ಆರೋಪಿಸಿದ್ದಾರೆ.
ಅಸಂಖ್ಯಾತ ಎಲ್ ಪಿಜಿ ಬಳಕೆದಾರರಲ್ಲಿ ಆತಂಕ ಸೃಷ್ಟಿಸಿರುವ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವೆ ಶೋಭಾ ಅವರು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡುವುದು ಸೂಕ್ತ. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಪೂಜಾರಿ ಹೇಳಿದರು.
ಆಹಾರ ಕರ್ನಾಟಕ ಸೈಟ್ ಪ್ರಾಬ್ಲಂ: ಎಲ್‌ಪಿಜಿ ಸಂಪರ್ಕದ ಕುರಿತು ಜನರಲ್ಲಿ ಮೂಡಿರುವ ಆತಂಕ ಕಡಿಮೆಯಾಗಿಲ್ಲ. ಆಹಾರ ವೆಬ್ ಸೈಟ್ ಗೆ ಎಗ್ಗಿಲ್ಲದೆ ಗ್ರಾಹಕರು ಮುತ್ತಿಗೆ ಹಾಕುತ್ತಿದ್ದಾರೆ.
ಇನ್ನೊಂದೆಡೆ ವೆಬ್ ಸೈಟ್ ಬಗ್ಗೆ ಅರಿವಿಲ್ಲದವರು ತಾಲೂಕು ಕಚೇರಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಹಲವು ನ್ಯೂನ್ಯತೆಗಳ ಆಗರವಾಗಿರುವ ವೆಬ್ ಸೈಟ್ ಬಗ್ಗೆ ದೂರು ನೀಡಿದರೂ ಫಲ ಸಿಕ್ಕಿಲ್ಲ.
ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಜಗನ್ನಾಥ ಎಂಬುವರು ಆರ್ ಆರ್ ನಂಬರ್ ನೀಡಿ ಎಲ್ ಪಿಜಿ ಸಂಪರ್ಕದ ಬಗ್ಗೆ ನೋಡಿದರೆ ವಾಣಿಜ್ಯ ಸಂಪರ್ಕ ಎಂದು ಸೂಚಿಸಲಾಗಿದೆ.
ರಮೇಶ್ ಎಂಬುವರು ವಿದ್ಯುತ್ ಬಿಲ್, ಎಲ್‌ಪಿಜಿ ದಾಖಲೆ, ಪಡಿತರ ಚೀಟಿ ದಾಖಲೆ ಒದಗಿಸಿದರೆ ವೆಬ್ ಸೈಟ್ ಮಾತ್ರ ಇನ್ನೂ ಪ್ರಗತಿಯಲ್ಲಿದೆ ಎಂದು ಉತ್ತರ ನೀಡುತ್ತಿದೆ. ಆನ್ ಲೈನ್ ಸಂಪರ್ಕ ಮಾಹಿತಿ ತಿದ್ದುಪಡಿ ಮಾಡಲು ಸಾಧ್ಯವಾಗುತ್ತಿಲ್ಲ.
ಕೆಲವರ ಪಡಿತರ ಚೀಟಿ ರದ್ದಾಗಿದೆ. ವಿದ್ಯುತ್ ಸಂಪರ್ಕ ಕಮರ್ಷಿಯಲ್ ಎಂದು ಉತ್ತರ ಬಂದಿದೆ. ಆಹಾರ ಇಲಾಖೆ ಮಾತ್ರ ಮೆಸ್ಕಾಂ, ವೆಬ್ ಸೈಟ್ ಅಡ್ಮಿನ್, ಇನ್ನಿತರರ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಎಲ್ಲಾ ತಿಳಿದ ಸಚಿವೆ ಶೋಭಾ ಸದ್ಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಳಿವು ಉಳಿವಿನ ಬಗ್ಗೆ ಚಿಂತಿಸುತ್ತಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರ ಈ ಅರಣ್ಯರೋದನ ಕೇವಲ ಉಡುಪಿ ಜಿಲ್ಲೆಗೆ ಸೀಮಿತವಾಗಿಲ್ಲ. ರಾಜ್ಯದೆಲ್ಲೆಡೆ ಒಂದೇ ಪ್ರಾಬ್ಲಂ. ಅದೇ ಗ್ಯಾಸ್ ಪ್ರಾಬ್ಲಂ.












Click it and Unblock the Notifications