ಯಾವುದೇ ಸಭೆ ನಡೆಸಬೇಡಿ, ಗೌರವಯುತವಾಗಿ ರಾಜೀನಾಮೆ ನೀಡಿ

ಗುರುವಾರ ಬೆಳಗ್ಗೆ 8.30ರ ವೇಳೆಗೆ ರಾಜಕೀಯ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾಗಿದೆ. 'ನಿಮಗೆ ಗೌರವಯುತ ವಿದಾಯ ಕಾದಿದೆ. ಈಗಾಗಲೇ ಗಣಿ ಧೂಳಿನಿಂದ ಹೈರಾಣವಾಗಿದ್ದೇವೆ. ನೀವು ಮತ್ತಷ್ಟು ರಾಡಿ ಎಬ್ಬಿಸಬೇಡಿ. ಅದೇನೋ 10 ಗಂಟೆಗೆ ಬೆಂಗಳೂರಿನಲ್ಲಿ ಸಚಿವರು, ಶಾಸಕರ ಸಭೆ ಕರೆದಿದ್ದೀರಂತೆ. ಅಂತಹ ಯಾವುದೇ ಸಭೆ ನಡೆಸಬೇಡಿ. ಇದು ಪಕ್ಷದ ಪ್ರತಿಷ್ಠೆ' ಎಂದು ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ತುರ್ತು ಸಂದೇಶ ಕಳಿಸಿದೆ.
ಯಡಿಯೂರಪ್ಪ ಅವರು ಕರೆದಿರುವ ಸಭೆಯಲ್ಲಿ ಯಾವುದೇ ಕಾರಣಕ್ಕೂ ಭಾಗವಹಿಸಬಾರದು ಎಂದು ಬಿಜೆಪಿ ಹೈಕಮಾಂಡ್ ಕರ್ನಾಟಕದ ಶಾಸಕರು ಮತ್ತು ಸಚಿವರಿಗೂ ಕಟ್ಟಾಜ್ಞೆ ನೀಡಿದೆ. ಇದರಿಂದ ಸದ್ಯಕ್ಕೆ ಆಕಾಶಮಾರ್ಗದಲ್ಲಿರುವ ಯಡಿಯೂರಪ್ಪ ಅವರ ಮುಂದಿನ ನಡೆಯೇನು ಎಂಬುದು ಕುತೂಹಲಕಾರಿಯಾಗಿದೆ. ಯಡಿಯೂರಪ್ಪ ಅವರು ಈಶ್ವರಪ್ಪ, ಶೆಟ್ಟರ್ ಹಾಗೂ ಮತ್ತಿತರ ನಾಯಕರ ಜತೆಗೂಡಿ ಬೆಂಗಳೂರು ವಿಮಾನ ಹತ್ತಿದ್ದಾರೆ. 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈ ಮಧ್ಯೆ, ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಹೈಕಮಾಂಡ್ ಸಭೆ ಸೇರಲಿದ್ದೇವೆ. ಅದರಲ್ಲಿ ನಿಮ್ಮ ರಾಜೀನಾಮೆ ಬಗ್ಗೆ ಸ್ಪಷ್ಟ ಸಂದೇಶ ತೆಗೆದುಕೊಳ್ಳುತ್ತೇವೆ ಎಂದಿರುವ ಬಿಜೆಪಿ, ಇದೇ ಧಾವಂತದಲ್ಲಿ ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಯಡಿಯೂರಪ್ಪ ಜತೆ ವೈಯಕ್ತಿಕವಾಗಿ ಮಾತನಾಡಲು ಅವರನ್ನು 12 ಗಂಟೆ ವೇಳೆಗೆ ದೆಹಲಿಗೆ ಕಳಿಸಲು ನಿರ್ಧರಿಸಿದೆ.












Click it and Unblock the Notifications