ಕುರ್ಚಿ ಉಳಿಸಿಕೊಳ್ಳೋ ತಂತ್ರ ಯಡಿಯೂರಪ್ಪಗೆ ಗೊತ್ತಿದೆ!

ಮಾರಿಷಸ್ ನಿಂದ ರಾಜ್ಯಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಕಾರ್ಮೋಡ ಕವಿದಿದ್ದು, ಯಾವುದೇ ಕ್ಷಣದಲ್ಲಾದರೂ ಭಿನ್ನಮತದ ಮಳೆ ಭೀಕರವಾಗಿ ಸುರಿವ ಲಕ್ಷಣಗಳು ಕಂಡಿದೆ.
ಆದರೆ, ಯಾವುದೇ ರಾಜಕೀಯ ಬೆಂಕಿ, ಬಿರುಗಾಳಿ, ವಿಕೋಪಗಳನ್ನು ಅರಗಿಸಿಕೊಳ್ಳುವ ತಾಕತ್ತು ಯಡಿಯೂರಪ್ಪ ಅವರಿಗಿದ್ದು, ಈ ಬಾರಿಯೂ ತಮ್ಮ ಕುರ್ಚಿ ಉಳಿಸಿಕೊಳ್ಳಲಿದ್ದಾರೆ.
ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕೇಂದ್ರದ ನಾಯಕ ಅನಂತ ಕುಮಾರ್, ಸಚಿವ ಜಗದೀಶ್ ಶೆಟ್ಟರ್, ವಿಎಸ್ ಆಚಾರ್ಯ, ಸುರೇಶ್ ಕುಮಾರ್ ಅಲ್ಲದೇ ಶೋಭಾ ಕರಂದ್ಲಾಜೆ ಹೆಸರು ಸಿಎಂ ಪಟ್ಟಗಾಗಿ ನಡೆಯುತ್ತಿರುವ ರೇಸ್ ನಲ್ಲಿದೆ.
ಯಡಿಯೂರಪ್ಪಗೆ ಯಾವುದೇ ತೊಂದರೆಯಿಲ್ಲ:
* ಟೆಲಿಫೋನ್ ಕದ್ದಾಲಿಕೆ, ಅವರ ಮೇಲೆ ಒತ್ತಡ ಹೇರಿಕೆ, ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಹೆಸರಿರುವುದು ಎಲ್ಲವೂ ಮಾಧ್ಯಮಗಳಿಗೆ ಆಹಾರವೇ ಹೊರತೂ ಕಾನೂನಾತ್ಮಕವಾಗಿ ಅಥವಾ ಸಂವಿಧಾನಾತ್ಮಕವಾಗಿ ಯಾವುದೇ ಅಡ್ಡಿ ಉಂಟು ಮಾಡಿಲ್ಲ ಎಂಬುದು ಯಡಿಯೂರಪ್ಪಗೆ ಗೊತ್ತು.
* ಭೂ ಹಗರಣದಲ್ಲಿ ಆರೋಪ ಹೊತ್ತು ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದರೂ ರಾಜೀನಾಮೆ ಕೇಳಲು ಹಿಂಜರೆಯುವ ಹೈ ಕಮಾಂಡ್, ಅಕ್ರಮ ಗಣಿಗಾರಿಕೆ ವರದಿಯಲ್ಲಿ ಹೆಸರು ಬಂದ ತಕ್ಷಣ ತನ್ನನ್ನು ಕೆಳಗಿಳಿಸುವ ಧೈರ್ಯ ಮಾಡುವುದಿಲ್ಲ ಎಂಬುದು ಯಡಿಯೂರಪ್ಪಗೆ ಗೊತ್ತಿದೆ.
* ಏನೇ ತಂತ್ರಗಾರಿಕೆ ನಡೆದರೂ ಉಳಿದಿರುವ ಅಲ್ಪಾವಧಿಯಲ್ಲಿ ಸರ್ಕಾರವನ್ನು ಮುನ್ನೆಡೆಸಿ ಜೊತೆಗೆ ಹಗರಣಗಳ ಜೊತೆ ಗುದ್ದಾಡುವ ಸಾಮರ್ಥ್ಯ ಯಡಿಯೂರಪ್ಪ ಬಿಟ್ಟರೆ ಮತ್ತೊಬ್ಬರಿಗೆ ಇಲ್ಲ.
* ಹೈ ಕಮಾಂಡ್ ಮುಂದೆ ಅಥವಾ ಸಾರ್ವಜನಿಕವಾಗಿ ಯಡಿಯೂರಪ್ಪ ಅವರಿಗೆ ಬದಲೀ ನಾಯಕನಾಗಿ ಯಾರೂ ಬೆಳೆಯಲೇ ಇಲ್ಲ ಎಂಬುದು ಯಡಿಯೂರಪ್ಪಗೆ ಪ್ಲಸ್ ಪಾಯಿಂಟ್.
* ಒಂದು ವೇಳೆ ಕೆಳಗಿಳಿಯಲೇ ಬೇಕಾದರೆ, ಸರ್ಕಾರವನ್ನು ಪತನಗೊಳಿಸಿ ಚುನಾವಣೆ ಎದುರಿಸಿ ಎಂದು ಯಡಿಯೂರಪ್ಪ ಘೋಷಿಸುವ ಸಾಧ್ಯತೆ ಹೆಚ್ಚಿದೆ.
* ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲೇ ಹಗರಣದ ಆರೋಪ ಹೊತ್ತ ಮುಖ್ಯಮಂತ್ರಿಗಳು ಕೆಳಗಿಳಿಯದೇ ಇರುವಾಗ ನಾನ್ಯಾಕೆ ಕೆಳಗಿಳಿಯಲಿ ಎಂದು ಧೈರ್ಯವಾಗಿ ಯಡಿಯೂರಪ್ಪ ವಿಪಕ್ಷಗಳಿಗೆ ಪ್ರಶ್ನಿಸಬಹುದು.












Click it and Unblock the Notifications