ಅಕ್ರಮ ಗಣಿ ವರದಿ ಸ್ಫೋಟ: ಇದೋ ಇಲ್ಲಿದೆ ಮುಖ್ಯಾಂಶಗಳು

santosh hegde
ಬೆಂಗಳೂರು, ಜುಲೈ21: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಲಿರುವ ತನಿಖಾ ವರದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ, ಬಿ.ಶ್ರೀರಾಮುಲು, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸಭೆ ಸದಸ್ಯ ಅನಿಲ್ ಲಾಡ್, ಶಾಸಕ ಆನಂದ ಸಿಂಗ್ ಸೇರಿದಂತೆ ಹಲವು ರಾಜಕೀಯ ಮುಖಂಡರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವು ಗಣಿ ಗುತ್ತಿಗೆಗೆ ಕೋರಿರುವ ಅರ್ಜಿಯೊಂದರ ವಿಲೇವಾರಿಗಾಗಿ ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪನಿಯಿಂದ 40 ಕೋಟಿ ರೂಪಾಯಿ ಹಣ ಪಡೆದಿದೆ ಎಂಬ ಆರೋಪ ವರದಿಯಲ್ಲಿದೆ. ತನಿಖಾ ತಂಡದ ನೇತೃತ್ವ ವಹಿಸಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಈ ಡಾ. ಯು.ವಿ. ಸಿಂಗ್ ಈ ಸಂಬಂಧ ಸಲ್ಲಿಸಿರುವ ವರದಿಯನ್ನು ಲೋಕಾಯುಕ್ತರು ದೃಢೀಕರಿಸಿದ್ದಾರೆ.

ಜಿಂದಾಲ್ ಸಮೂಹದ ಸೌತ್ ವೆಸ್ಟ್ ಮೈನಿಂಗ್ ಕಂಪೆನಿ ಬೆಂಗಳೂರು ಉತ್ತರ ತಾಲ್ಲೂಕಿನ ಕೆ.ಆರ್. ಪುರ ಹೋಬಳಿಯ ರಾಚೇನಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿಯವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಮತ್ತು ಅಳಿಯ ಆರ್.ಎನ್. ಸೋಹನ್‌ಕುಮಾರ್ ಅವರಿಂದ 20 ಕೋಟಿ ರೂಪಾಯಿ ನೀಡಿ ಒಂದು ಎಕರೆ ಭೂಮಿ ಖರೀದಿಸಿದೆ.

ಆದರೆ ಅಲ್ಲಿ ಒಂದು ಎಕರೆ ಭೂಮಿಯ ಮಾರುಕಟ್ಟೆ ಎರಡು ಕೋಟಿ ರೂಪಾಯಿ ಆಸುಪಾಸಿನಲ್ಲೇ ಇದೆ. ಹತ್ತು ಪಟ್ಟು ಬೆಲೆ ನೀಡಿರುವುದರ ಹಿಂದೆ ಬೇರೆಯದೇ ಆದ ಉದ್ದೇಶವಿತ್ತು ಎಂಬ ಅಂಶ ಲೋಕಾಯುಕ್ತರ ವರದಿಯಲ್ಲಿದೆ.

ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರು ಟ್ರಸ್ಟಿಗಳಾಗಿರುವ ಪ್ರೇರಣಾ ಶೈಕ್ಷಣಿಕ ಮತ್ತು ಸಾಮಾಜಿಕ ಟ್ರಸ್ಟ್‌ಗೆ ಇದೇ ಕಂಪನಿ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಸೌತ್‌ವೆಸ್ಟ್ ಮೈನಿಂಗ್ ಕಂಪನಿ ಬೇರೊಬ್ಬರಿಂದ ಸಾಲ ಪಡೆದು ಈ ಹಣವನ್ನು ಯಡಿಯೂರಪ್ಪ ಕುಟುಂಬದ ಟ್ರಸ್ಟ್‌ಗೆ ನೀಡಿದೆ.

ಇದೇ ಕಂಪನಿಯ ಸಹಭಾಗಿ ಕಂಪೆನಿಗಳಾದ ಇಂಡಸ್ಟ್ರಿಯಲ್ ಟೆಕ್ನೋ ಮ್ಯಾನ್‌ಪವರ್ ಸಪ್ಲೈ ಅಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ರೂ 3.4 ಕೋಟಿ), ಜೈ ಭಾರತ್ ಟೆಕ್ನಿಕಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ರೂ 3.4 ಕೋಟಿ ) ಮತ್ತು ರಿಯಲ್ ಟೆಕ್ನಿಕಲ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ರೂ 3.2 ಕೋಟಿ) ಮೂಲಕ ಪ್ರೇರಣಾ ಟ್ರಸ್ಟ್‌ಗೆ 10 ಕೋಟಿ ರೂಪಾಯಿ ಸಂದಾಯ ಆಗಿದೆ ಎಂಬ ಉಲ್ಲೇಖವಿದೆ.

ಜಿಂದಾಲ್ ಸಮೂಹ ಗಣಿ ಗುತ್ತಿಗೆ ಕೋರಿ ಸಲ್ಲಿಸಿರುವ ಅರ್ಜಿ ಹಲವು ದಿನಗಳಿಂದ ವಿಲೇವಾರಿಗೆ ಬಾಕಿ ಉಳಿದಿದೆ. ಈ ಗುತ್ತಿಗೆಯನ್ನು ಪಡೆಯುವ ಉದ್ದೇಶದಿಂದಲೇ ಕಂಪೆನಿಯು ತನ್ನ ಸಹವರ್ತಿ ಕಂಪೆನಿಗಳ ಮೂಲಕ ಮುಖ್ಯಮಂತ್ರಿಯವರ ಕುಟುಂಬಕ್ಕೆ 40 ಕೋಟಿ ರೂಪಾಯಿ ನೀಡಿದೆ.ಇದು ಒಂದು ಸಂಶಯಾಸ್ಪದವಾದ ಸಂದಾಯ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಲೋಕಾಯುಕ್ತರು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ.

ಅಕ್ರಮಕ್ಕೆ ರಕ್ಷಣೆ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಮುಖ್ಯಮಂತ್ರಿಗೆ ಸ್ಪಷ್ಟವಾಗಿ ತಿಳಿದಿತ್ತು. ಆದರೆ, ತಮ್ಮ ಸಚಿವ ಸಂಪುಟದ ಸದಸ್ಯರೇ ಅಕ್ರಮ ಗಣಿಗಾರಿಕೆ, ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳ್ಳಾರಿಯ ರೆಡ್ಡಿ ಸಹೋದರರ ಒತ್ತಡಕ್ಕೆ ತಲೆಬಾಗಿದ ಯಡಿಯೂರಪ್ಪ ಅಕ್ರಮಗಳ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕಿದ್ದರು ಎಂಬ ಅಭಿಪ್ರಾಯವೂ ದಾಖಲಾಗಿದೆ.

ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸೇರಿದಂತೆ ಅವರ ಸಚಿವಾಲಯದ ಹಲವು ಅಧಿಕಾರಿಗಳ ಹೆಸರು ವರದಿಯಲ್ಲಿದೆ. ಅಲ್ಲದೇ ಮುಖ್ಯಮಂತ್ರಿಯವರ ಪುತ್ರರು, ಅಳಿಯ ಸೇರಿದಂತೆ ಕುಟುಂಬದ ಹಲವು ಸದಸ್ಯರೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರ ಜೊತೆ ನಂಟು ಹೊಂದಿರುವ ಬಗ್ಗೆ ವರದಿಯಲ್ಲಿ ದಾಖಲಿಸಿದ್ದಾರೆ.

ರೆಡ್ಡಿ ಕುಟುಂಬ: ಬಳ್ಳಾರಿ ರೆಡ್ಡಿ ಸಹೋದರರ ಕುಟುಂಬದ ಎಲ್ಲ ಸದಸ್ಯರೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದರು ಎಂಬ ಅಂಶ ವರದಿಯಲ್ಲಿದೆ. ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತಿತರರು ಪಾಲುದಾರರಾಗಿರುವ ಓಬಳಾಪುರಂ ಕಂಪೆನಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ ಎಂದು ವರದಿ ನೇರವಾಗಿ ಹೇಳಿದೆ. ಜನಾರ್ದನ ರೆಡ್ಡಿ ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರ ಹೆಸರಿನಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬುದು ಉಲ್ಲೇಖವಾಗಿದೆ.

ಬಳ್ಳಾರಿ ಜಿಲ್ಲೆಯ ವಿವಿಧೆಡೆ ರೆಡ್ಡಿ ಸಹೋದರರ ಕುಟುಂಬ ಲಕ್ಷ್ಮಿ ಅರುಣಾ ಹೆಸರಿನಲ್ಲಿ ಅಕ್ರಮವಾಗಿ ಅದಿರು ಸಂಗ್ರಹಾಗಾರಗಳನ್ನು ನಿರ್ಮಿಸಿತ್ತು. ಅಲ್ಲಿ ಸಂಗ್ರಹಿಸಲಾಗಿದ್ದ ಅದಿರನ್ನು ಆಂಧ್ರಪ್ರದೇಶದಲ್ಲಿನ ಓಬಳಾಪುರಂ ಗಣಿ ಕಂಪನಿ ಹಸರಿನಲ್ಲಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು.

ಬಳ್ಳಾರಿಯ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯನ್ನು ಖರೀದಿಸಿದ್ದ ಜನಾರ್ದನ ರೆಡ್ಡಿ ಮತ್ತು ಲಕ್ಷ್ಮಿ ಅರುಣಾ, ಕಾನೂನನ್ನು ಉಲ್ಲಂಘಿಸಿ ಗಣಿ ಗುತ್ತಿಗೆಯ ಮಾಲೀಕತ್ವವನ್ನೂ ವರ್ಗಾವಣೆ ಮಾಡಿಕೊಂಡಿದ್ದರು. ಇಡೀ ಪ್ರಕರಣದಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತೆರಿಗೆ ವಂಚನೆ: ರೆಡ್ಡಿ ಸಹೋದರರ ಕುಟುಂಬ ಸಿಂಗಪುರದಲ್ಲಿನ ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಷನಲ್ ಕಂಪನಿಯನ್ನು ಬಳಸಿಕೊಂಡು ಭಾರಿ ಪ್ರಮಾಣದ ತೆರಿಗೆ ವಂಚನೆ ಮಾಡಿರುವುದನ್ನೂ ಲೋಕಾಯುಕ್ತರು ಪತ್ತೆ ಹಚ್ಚಿದ್ದಾರೆ.

ಓಬಳಾಪುರಂ ಗಣಿ ಕಂಪೆನಿ, ಅನಂತಪುರ ಗಣಿ ಕಂಪೆನಿ, ಅಸೋಸಿಯೇಟೆಡ್ ಕಂಪೆನಿಗಳ ಮೂಲಕ ಕಡಿಮೆ ದರಕ್ಕೆ ಜಿಎಲ್‌ಎ ಕಂಪನಿಗೆ ಅದಿರನ್ನು ರಫ್ತು ಮಾಡಲಾಗುತ್ತಿತ್ತು. ಬಳಿಕ ಅದನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಅಂಶವೂ ಇದೆ.

ವಿವಿಧ ಸಂದರ್ಭಗಳಲ್ಲಿ ಆದಾಯ ತೆರಿಗೆ ಇಲಾಖೆಯು ರೆಡ್ಡಿ ಸಹೋದರರು ಮತ್ತು ಅವರ ನಿಕಟವರ್ತಿಗಳ ಮೇಲೆ ದಾಳಿ ನಡೆಸಿತ್ತು. ನಂತರದ ದಿನಗಳಲ್ಲಿ ಇಲಾಖೆ ನಡೆಸಿದ ತನಿಖೆಯಿಂದ ಪತ್ತೆಯಾದ ಎಲ್ಲ ವಿವರಗಳು, ವಶಪಡಿಸಿಕೊಂಡ ಮಹತ್ವದ ದಾಖಲೆಗಳನ್ನು ಇಲಾಖೆಯು ಲೋಕಾಯುಕ್ತ ತನಿಖಾ ತಂಡಕ್ಕೆ ಒದಗಿಸಿತ್ತು.

ಈ ದಾಖಲೆಗಳ ಆಧಾರದಲ್ಲಿ ಮತ್ತಷ್ಟು ತನಿಖೆ ನಡೆಸಿದ್ದ ಡಾ.ಯು.ವಿ. ಸಿಂಗ್ ನೇತೃತ್ವದ ತನಿಖಾ ತಂಡ, ರೆಡ್ಡಿ ಸಹೋದರರು ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದರು ಎಂಬ ಅಂಶವನ್ನು ಪತ್ತೆಮಾಡಿದೆ.

ಅಕ್ರಮ ಗಣಿಗಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಹೊಸಪೇಟೆಯ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಗೋವಿಂದರಾಜು, ಅಲಿ ಖಾನ್ ಮತ್ತಿತರರ ಜೊತೆ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ನೇರವಾಗಿ ಸಂಪರ್ಕ ಹೊಂದಿದ್ದಾರೆ ಎಂಬ ಅಂಶ ವರದಿಯಲ್ಲಿದೆ.

ಯಾವುದೇ ಆರ್ಥಿಕ ಆಧಾರಗಳಿಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಬೇನಾಮಿ ಕಂಪೆನಿಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಜೀರೋ ಮೆಟೀರಿಯಲ್, ರಿಸ್ಕ್ ಮೆಟೀರಿಯಲ್ ಅದಿರನ್ನು ಸಾಗಿಸುತ್ತಿದ್ದರು ಎಂಬುದೂ ವರದಿಯಲ್ಲಿದೆ.

ಹಫ್ತಾ ವಸೂಲಿ: ರೆಡ್ಡಿ ಸಹೋದರರು ಬಳ್ಳಾರಿಯ ಎಲ್ಲ ಗಣಿ ಮಾಲೀಕರಿಂದಲೂ ಶೇಕಡ 40ರಿಂದ 45ರಷ್ಟು ಹಫ್ತಾ ವಸೂಲಿ ಮಾಡುತ್ತಿದ್ದರು. ತಮ್ಮ ಮಾತು ಕೇಳುವ ಅಧಿಕಾರಿಗಳನ್ನು ಜಿಲ್ಲೆಗೆ ನಿಯೋಜಿಸಿಕೊಂಡು ಇದೆಲ್ಲವನ್ನೂ ನಿಯಂತ್ರಿಸುತ್ತಿದ್ದರು. ಹಫ್ತಾ ನೀಡದ ಕಂಪೆನಿಗಳಿಗೆ ಅದಿರು ಸಾಗಣೆ ಪರವಾನಗಿ ನೀಡುತ್ತಿರಲಿಲ್ಲ ಎಂಬ ಗಂಭೀರ ಆರೋಪವಿದೆ.

ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಬಿ.ಶಿವಪ್ಪ, ಐಪಿಎಸ್ ಅಧಿಕಾರಿ ಸೀಮಂತ್‌ಕುಮಾರ್ ಸಿಂಗ್, ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ ಸೇರಿದಂತೆ ಹಲವು ಅಧಿಕಾರಿಗಳು ರೆಡ್ಡಿ ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ಅವರ ಸಹಕಾರದಿಂದಲೇ ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬುದನ್ನು ತನಿಖೆ ಬಯಲು ಮಾಡಿದೆ.

ಸೋಮಣ್ಣ ಪುತ್ರರೂ ಭಾಗಿ: ವಸತಿ ಸಚಿವ ವಿ.ಸೋಮಣ್ಣ ಪುತ್ರರಾದ ಅರುಣ್ ಸೋಮಣ್ಣ ಮತ್ತು ನವೀನ್ ಸೋಮಣ್ಣ ಪಾಲುದಾರರಾಗಿರುವ ಮಾತಾ ಮಿನರಲ್ಸ್ ಕಂಪೆನಿ ಕೂಡ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಲೋಕಾಯುಕ್ತ ತನಿಖಾ ವರದಿ ದೃಢಪಡಿಸಿದೆ.

ಈ ಕಂಪೆನಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಮತ್ತು ಮೂಡಲಪಾಳ್ಯ ಗ್ರಾಮದಲ್ಲಿ 38 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಮೂಲತಃ ಬಿ.ಆರ್.ಅಮರಸಿಂಗ್ ಎಂಬುವರಿಗೆ ಸೇರಿದ್ದ ಗಣಿ ಗುತ್ತಿಗೆಯ ವರ್ಗಾವಣೆಯಲ್ಲೇ ಭಾರಿ ಪ್ರಮಾಣದ ಅಕ್ರಮ ನಡೆದಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ.

ಯಾವುದೇ ಗಣಿ ಗುತ್ತಿಗೆಯ ವ್ಯಾಪ್ತಿ ವಿಸ್ತರಣೆ, ನಕ್ಷೆ ಬದಲಾವಣೆಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ಅಗತ್ಯ. ಆದರೆ ಮಾತಾ ಮಿನರಲ್ಸ್ ಗಣಿ ಗುತ್ತಿಗೆಯನ್ನು ಕೇಂದ್ರದ ಅನುಮತಿ ಇಲ್ಲದೇ ಬದಲಾವಣೆ ಮಾಡಲಾಗಿದೆ. ಪ್ರಭಾವಿ ರಾಜಕಾರಣಿಯಾಗಿರುವ ಸಚಿವ ಸೋಮಣ್ಣ ಅವರು ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಿದ್ದರಿಂದ ಇದೆಲ್ಲವೂ ಸಲೀಸಾಗಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಜಂತಕಲ್ ಸುಳಿಯಲ್ಲಿ ಎಚ್‌ಡಿಕೆ: ವಿವಾದಿತ ಜಂತಕಲ್ ಗಣಿ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನಲ್ಲಿ ಅಕ್ರಮವಾಗಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ಅವರು ಅನುಮತಿ ನೀಡಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಕಂಪೆನಿಯ ಮಾಲೀಕ ವಿನೋದ್ ಗೋಯಲ್, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.

ಹಿಂದೆ ಕಂಪೆನಿಯು ಸಂಗ್ರಹಿಸಿದ್ದ ಅದಿರು ಸಾಗಣೆಗೆ ಅನುಮತಿ ನೀಡುವಂತೆ ಕೋರಿದ್ದರು. ಒತ್ತಡಕ್ಕೆ ಮಣಿದ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನುಮತಿ ನೀಡಿದ್ದರು ಎಂಬ ಆರೋಪ ವರದಿಯಲ್ಲಿದೆ.

ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪೆನಿಯ ಹೆಸರಿನಲ್ಲಿ ಗಣಿ ಗುತ್ತಿಗೆ ನೀಡುವ ಸಂಬಂಧ ಪ್ರಕ್ರಿಯೆ ಆರಂಭಿಸುವುದರಲ್ಲೂ ಅಕ್ರಮ ನಡೆದಿದೆ. ಬೇರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬದಲಿಸಿ, ಗೋಯಲ್ ಒಡೆತನದ ಸಂಸ್ಥೆಯ ಹೆಸರಿನಲ್ಲಿ ಅದನ್ನು ಮುಂದುವರಿಸಲಾಗಿದೆ. ಈ ಪ್ರಕರಣದಲ್ಲೂ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಒತ್ತಡಕ್ಕೆ ಮಣಿದಿದ್ದರು ಎಂಬ ಉಲ್ಲೇಖವಿದೆ.

ಅನಿಲ್ ಲಾಡ್; ಆನಂದ್ ಸಿಂಗ್: ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಇವರ ಒಡೆತನದ ವಿ.ಎಸ್.ಲಾಡ್ ಗಣಿ ಕಂಪೆನಿ, ಕೆನರಾ ಮಿನರಲ್ಸ್ ಮತ್ತಿತರ ಕಂಪೆನಿಗಳು ಬಳ್ಳಾರಿ ಮತ್ತು ತುಮಕೂರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದನ್ನು ಖಚಿತಪಡಿಸಿರುವ ಅಂಶ ಲೋಕಾಯುಕ್ತ ವರದಿಯಲ್ಲಿದೆ.

ಬಿಜೆಪಿ ಶಾಸಕ ಆನಂದ್ ಸಿಂಗ್ ಒಡೆತನದ ಎಸ್.ಬಿ.ಮಿನರಲ್ಸ್ ಕೂಡ ಅಕ್ರಮ ಗಣಿಗಾರಿಕೆ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ತನಿಖೆ ದೃಢಪಡಿಸಿದೆ. ದೊಡ್ಡ ಪ್ರಮಾಣದ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿರುವುದು, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರಿಂದ ಅದಿರು ಖರೀದಿಸಿ ರಫ್ತು ಮಾಡಿರುವುದು ಸೇರಿದಂತೆ ಹಲವು ಆರೋಪಗಳು ವರದಿಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+