ಉಪವಾಸ ಕುಳಿತ ಕುಮಾರಸ್ವಾಮಿಗೆ ಸಿಕ್ಕಿದ್ದಾದರೂ ಏನು?

ತಮ್ಮನ್ನು ನಿಷ್ಕಳಂಕ ಎಂದು ಜನ ಗುರುತಿಸುವಂತಾಗಲು ಬಿಜೆಪಿಯ ಆರೋಪವನ್ನು ತನಿಖೆಗೆ ಒಪ್ಪಿಸಲಾಗುತ್ತದೆ. ತಮ್ಮ ಹೋರಾಟಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ಪ್ರಗತಿಪರರು, ಬುದ್ದಿಜೀವಿಗಳು ಕೈಜೋಡಿಸುತ್ತಾರೆ. ಸರ್ಕಾರ ಥರಗುಟ್ಟುತ್ತದೆ. ಪಕ್ಷದ ಸಂಘಟನೆಯೂ ಸಾಕಷ್ಟು ಬಲಗೊಳ್ಳುತ್ತದೆ ಎಂದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಈ ಯಾವ ನಿರೀಕ್ಷೆಗಳು ಈಡೇರಲಿಲ್ಲ.
ಸಾರ್ವಜನಿಕ ಜೀವನದಲ್ಲಿ ಕುಮಾರಸ್ವಾಮಿ ಇದುವರೆಗೂ ಯಾವುದೇ ಹೋರಾಟವನ್ನು ಮಾಡಿದವರೇನು ಅಲ್ಲ. ಬಹಳ ಸುಲಭವಾಗಿ ಅಧಿಕಾರದ ಗದ್ದುಗೆ ಅನುಭವಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅಕ್ರಮಗಳ ಕುರಿತು ಸಿಕ್ಕ ದಾಖಲೆಗಳನ್ನು ಬಿಡುಗಡೆ ಮಾಡುತ್ತ ಗಮನ ಸೆಳೆದಿದ್ದರೇ ಹೊರತು ಜನಪರವಾದ ಮತ್ತು ಜನರ ಸಮಸ್ಯೆಗಳ ಕುರಿತು ಹೋರಾಟ ರೂಪಿಸಲಿಲ್ಲ.
ಇದೇ ಮೊದಲ ಬಾರಿಗೆ ಹೋರಾಟವೊಂದಕ್ಕೆ ಮುಂದಾಗಿದ್ದರು. ಆದರೆ ಅದು 'ವೈಯಕ್ತಿಕ' ಹಿತಾಸಕ್ತಿಯನ್ನು ಹೊಂದಿದ್ದರಿಂದ ನಿರೀಕ್ಷಿತ ಫಲಗಳನ್ನು ನೀಡಲಿಲ್ಲ. ವೈಯಕ್ತಿಕ ಹಿತಾಸಕ್ತಿಯ ಹೋರಾಟಗಳಿಗೆ ಜನ ಯಾವತ್ತೂ ಬೆಂಬಲ ನೀಡುವುದಿಲ್ಲವೆಂಬುದು ಇದೀಗ ಮತ್ತೂಮ್ಮೆ ಸಾಬೀತಾದಂತಾಗಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಹೋರಾಟ ಆರಂಭಿಸಿದಾಗ ದೊರಕಿದ ಬೆಂಬಲ ಅವರಿಗೆ ಸಿಕ್ಕ ಯಶಸ್ಸಿನ ಹಿಂದೆ ಜನಶಕ್ತಿ ಸ್ವಯಂ ಮುಂದಾಗಿತ್ತು. ಏಕೆಂದರೆ ಅಂತಹವರ ಹೋರಾಟದ ಹಿಂದೆ ಸ್ವಾರ್ಥ ಇರಲಿಲ್ಲ.
ಆದರೆ ಇದೀಗ ವೈಯಕ್ತಿಕ ವಿಚಾರದಲ್ಲಿ ಉಪವಾಸ ಕೈಗೊಂಡು ಅದನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದರಿಂದ ಮತ್ತೆ ಪಕ್ಷಕ್ಕೆ ಹಿನ್ನೆಡೆಯೆಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಸರ್ಕಾರ ಸಿಬಿಐ ಇರಲಿ ಯಾವುದೇ ರೀತಿಯ ತನಿಖೆಗೂ ಒಪ್ಪಿಗೆ ನೀಡಿಲ್ಲ. ಅರ್ಧದಲ್ಲಿಯೇ ಉಪವಾಸ ಕೈಬಿಡುವ ಮೂಲಕ ಹೋರಾಟಕ್ಕೂ ತಿಲಾಂಜಲಿ ಇಟ್ಟಿದ್ದಾರೆ ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವೂ ಆಗಿದೆ.












Click it and Unblock the Notifications