ಕಾಮಾಟಿಪುರದಲ್ಲಿದ್ದ ಗುಂಡ್ಲುಪೇಟೆ ಮಹಿಳೆಯ ರಕ್ಷಣೆ

ನಾಲ್ಕು ವರ್ಷಗಳ ಹಿಂದೆ ಗುಂಡ್ಲುಪೇಟೆ ಬಳಿಯ ಗ್ರಾಮವೊಂದರಲ್ಲಿ ವಾಸವಾಗಿದ್ದ ವಿಧವೆಯೊಬ್ಬಳನ್ನು ಪರಿಚಯಿಸಿಕೊಂಡ ಇಬ್ಬರು ಹುಡುಗರು ಆಕೆಗೆ ಕುಡಿಯಲು ತಂಪುಪಾನೀಯ ನೀಡಿದ್ದರು. ಅದನ್ನು ಕುಡಿದ ಬಳಿಕ ಆಕೆ ಪ್ರಜ್ಞೆ ತಪ್ಪಿದ್ದಳು. ಆದರೆ ಆಕೆಗೆ ಪ್ರಜ್ಞೆ ಬರುವ ವೇಳೆಗೆ ಯುವಕರಿಬ್ಬರು ಆಕೆಯನ್ನು ಮುಂಬೈನ ಕಾಮಾಟಿಪುರಕ್ಕೆ ಮಾರಾಟ ಮಾಡಿದ್ದರು.
ಅಲ್ಲಿ ವಿವಿಧ ಹಿಂಸೆ ಅನುಭವಿಸುತ್ತಾ ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಆಕೆಯ ಬಳಿಗೆ ಇತ್ತೀಚೆಗೆ ಗುಲಬರ್ಗಾ ಮೂಲದ ಲಾರಿ ಚಾಲಕ ನೂರ್ ಅಹಮ್ಮದ್ ಎಂಬಾತ ತೆರಳಿದ್ದನು. ಆತ ಕರ್ನಾಟಕದವನೆಂದು ತಿಳಿದ ಆ ವಿಧವೆ ಹೆಂಗಸು ತನ್ನ ಕಷ್ಟವನ್ನು ಹೇಳಿದ್ದಳಲ್ಲದೆ, ಈ ನರಕದಿಂದ ತನ್ನನ್ನು ಪಾರು ಮಾಡುವಂತೆ ಬೇಡಿಕೊಂಡಿದ್ದಾಳೆ. ಆಕೆಯಿಂದ ಎಲ್ಲಾ ವಿಚಾರ ಕೇಳಿ ತಿಳಿದುಕೊಂಡ ಚಾಲಕ ನೂರ್‌ಅಹಮ್ಮದ್ ಗುಂಡ್ಲುಪೇಟೆಗೆ ತೆರಳಿ ಆಕೆಯ ಸಹೋದರನಿಗೆ ವಿಷಯ ತಿಳಿಸಿದ್ದಾನೆ. ಸಹೋದರ ಗ್ರಾಮಸ್ಥರೊಂದಿಗೆ ಮುಂಬೈಗೆ ತೆರಳಿ ಅಲ್ಲಿನ ಸೇವಾ ಸಂಸ್ಥೆ ಇಂಡಿಯನ್ ರೆಸ್‌ಕ್ಯೂ ಮಿಷನ್‌ನ ಮುಖ್ಯಸ್ಥ ಜೇಮ್ಸ್ ವರ್ಗೀಸ್ ಎಂಬುವರ ಸಹಾಯ ಪಡೆದು ಪೊಲೀಸರ ಸಹಕಾರದೊಂದಿಗೆ ಕಾಮಕೂಪದಲ್ಲಿದ್ದ ವಿಧವೆ ಮಹಿಳೆಯನ್ನು ಬಿಡಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.
ವಿಧವೆ ಮಹಿಳೆಯ ಪತಿ ಹತ್ತು ವರ್ಷಗಳ ಹಿಂದೆಯೇ ಮೃತಪಟ್ಟಿದ್ದ. ಇದ್ದ ಮಗನೊಬ್ಬನನ್ನು ಈಕೆಯೇ ಓದಿಸುತ್ತಿದ್ದಳು. ಆದರೆ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಪೋಷಕರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು. ಎಲ್ಲೂ ಸಿಗದಿದ್ದಾಗ ಕೈಚೆಲ್ಲಿ ಕುಳಿತಿದ್ದರು. ಈ ಪ್ರಕರಣದಿಂದ ಕರ್ನಾಟಕದಲ್ಲಿ ಯುವತಿಯರು ಹಾಗೂ ಮಹಿಳೆಯರನ್ನು ಅಪಹರಿಸಿ ಮಾರಾಟ ಮಾಡುತ್ತಿರುವ ಜಾಲವೊಂದು ಕಾರ್ಯಾಚರಣೆ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಪ್ರತಿ ದಿನ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮಹಿಳೆಯರು ನಾಪತ್ತೆಯಾಗುತ್ತಿರುವ ವರದಿಗಳು ಬರುತ್ತಿದ್ದು ಇದರ ಹಿಂದಿನ ರಹಸ್ಯ ಇನ್ನೂ ಬಯಲಾಗುತ್ತಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯವಿದೆ.












Click it and Unblock the Notifications