ಮತ್ತೊಂದು ಮಗುವಿನ ಮೇಲೆ ಬೀದಿನಾಯಿ ದಾಳಿ

ಎರಡು ವರ್ಷದ ಕಾಜೋಲ್ ಎಂಬ ಹುಡುಗಿ ನಾಯಿ ಕಡಿತಕ್ಕೊಳಗಾಗಿದ್ದಾಳೆ. ಕಾಜೋಲಳ ತಲೆ ಮತ್ತು ಕಾಲುಗಳನ್ನು ನಾಯಿಗಳು ಕಚ್ಚಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಜೋಲಳ ತಂದೆ ಗಾರೆ ಕೆಲಸ ಮಾಡುವವನಾಗಿದ್ದು, ಕುಟುಂಬ ಬಿಜಾಪುರದಿಂದ ಬಂದು ಇಲ್ಲಿ ಬೀಡುಬಿಟ್ಟಿದೆ.
ಶುಕ್ರವಾರ ಯಲಹಂಕದಲ್ಲಿ ಬೀದಿ ನಾಯಿಗಳು ಎರಡೂವರೆ ವರ್ಷದ ಕಂದಮ್ಮನನ್ನು ಕೊಂದುಹಾಕಿದ್ದವು. ಆದರೆ, ಬಿಬಿಎಂಪಿಯ ಜಂಟಿ ನಿರ್ದೇಶಕರಾಗಿರುವ ಪರ್ವೇಜ್ ಅಹ್ಮದ್ ಅವರ ಪ್ರಕಾರ, ಮಗು ಸತ್ತಿದ್ದು ನಾಯಿಗಳಿಂದಲ್ಲ. ನಿನ್ನೆ ಅಮವಾಸ್ಯೆಯಾಗಿದ್ದರಿಂದ ಮಾಂತ್ರಿಕರು ಈ ಕೆಲಸ ಮಾಡಿರಬಹುದೆಂದು ವಿಚಾರವನ್ನು ಮಂಡಿಸಿದ್ದಾರೆ.
ನಾಯಿಗಳ ಬೇಟೆ ಶುರು : ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆಗಿಳಿದಿರುವ ಬಿಬಿಎಂಪಿ ಯಲಹಂಕ ನ್ಯೂ ಟೌನ್ ನಲ್ಲಿ ಇಂದು ಸುಮಾರು ಐವತ್ತಕ್ಕೂ ಹೆಚ್ಚು ನಾಯಿಗಳನ್ನು ಹಿಡಿದಿದೆ. ಮಾಲಿಕರಿಗೆ ಸೇರಿದ ಕೆಲ ನಾಯಿಗಳನ್ನು ಬಿಟ್ಟಿದ್ದಾರೆ. ಕೆಲವಕ್ಕೆ ಸಂತಾನಹರಣ ಚುಚ್ಚುಮದ್ದನ್ನು ನೀಡಲಾಗಿದೆ.
ಕೊಲ್ಲಬೇಕಾ ಬೇಡವಾ? : ನಾಗರಿಕರಿಗೆ ಸಾಕಷ್ಟು ಉಪಟಳ ನೀಡುತ್ತಿರುವ ಈ ಬೀದಿ ನಾಯಿಗಳನ್ನು ಸಾಯಿಸಬೇಕಾ ಬೇಡವಾ ಎಂಬುದು ಸದ್ಯಕ್ಕೆ ಎದ್ದಿರುವ ಪ್ರಶ್ನೆ. ಬೀದಿ ನಾಯಿಗಳನ್ನು ಮಟ್ಟಹಾಕಬೇಕಿದ್ದರೆ ಪ್ರಾಣಿ ಹಿಂಸೆ ತಡೆ ಕಾನೂನು (Prevention of Cruelty to Animals Act 1960) ತಿದ್ದುಪಡಿ ಮಾಡಬೇಕು ಎಂಬುದು ಬಿಬಿಎಂಪಿ ವಾದ.
ಈ ಕಾನೂನಿನ ಪ್ರಕಾರ ನಾಯಿಗಳನ್ನು ಕೊಲ್ಲುವಂತಿಲ್ಲ. ಆದರೆ, ಸಂತಾನೋತ್ಪತ್ತಿ ಚಿಕಿತ್ಸೆ ಜಾರಿಯಲ್ಲಿದ್ದರೂ, ಹತೋಟಿಗೆ ಬರುತ್ತಿಲ್ಲ. ನಗರದಲ್ಲಿ ಸ್ವಚ್ಛತೆ ಕಾಪಾಡದಿರುವುದು ಮತ್ತು ಸಂಕಟ ಬಂದಾಗ ಮಾತ್ರ ಪ್ರತ್ಯಕ್ಷವಾಗುವ ಬಿಬಿಎಂಪಿಯ ನಿರ್ಲಕ್ಷ್ಯತನದಿಂದಾಗಿ ಬೀದಿ ನಾಯಿಗಳ ಸಂತತಿ ಮಿತಿಮೀರುತ್ತಿದೆ.
ಬೀದಿ ನಾಯಿಗಳನ್ನು ನಿರ್ನಾಮ ಮಾಡುವ ಉದ್ದೇಶದಿಂದ ಬೀದಿ ನಾಯಿ ಮುಕ್ತ ಸಂಸ್ಥೆ ಕೂಡ ಹುಟ್ಟಿಕೊಂಡಿದೆ. ಈ ಸಂಸ್ಥೆಯ ಸಹ ಸಂಸ್ಥಾಪಕಿ ಡಯಾನಾ ಬರೂಚಾ ಅವರ ಪ್ರಕಾರ, ಇಂಥ ನಾಯಿಗಳನ್ನು ನಿರ್ದಯವಾಗಿ ಕೊಂದುಹಾಕಬೇಕು ಎಂದು ಹೇಳುತ್ತಿದ್ದಾರೆ. ಒಂದು ಕಡೆ ಕಾನೂನಿನ ತಡೆ, ಇನ್ನೊಂದು ಕಡೆ ಪ್ರಾಣದಯಾ ಸಂಘದವರ ವಿರೋಧ ; ಏನು ಮಾಡಬೇಕು ಹೇಳಿ?












Click it and Unblock the Notifications