ಧೂಳು ಸಂಡೂರಿನ ಆಸ್ತಿ ; ನೀರು ನೈರ್ಮಲ್ಯ ನಾಸ್ತಿ

Sandur has everything except hygiene
ಬಳ್ಳಾರಿ, ಜು. 1 : ಸಂಡೂರು, ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರ. ಶ್ರೀಮಂತ ಗಣಿಗಾರಿಕೆಯ ಕೇಂದ್ರಬಿಂದು. ಆದರೆ, ಶುದ್ಧವಾದ ಕುಡಿಯುವ ನೀರು, ನೈರ್ಮಲ್ಯ, ರಸ್ತೆಗಳು, ಆರೋಗ್ಯ, ಇನ್ನಿತರೆ ಮೂಲಭೂತ ಸೌಲಭ್ಯಗಳು ಇಲ್ಲಿಯವರಿಗೆ ಮರೀಚಿಕೆ.

ಸಂಡೂರು ತಾಲೂಕಿನ ಭುವನಹಳ್ಳಿಯಲ್ಲಿ 'ಇಲಿಜ್ವರ" ಕಾಣಿಸಿಕೊಂಡಾಗ ಇಡೀ ಜಿಲ್ಲಾಡಳಿತ ಎಚ್ಚೆತ್ತಿತ್ತು. ಆದರೆ, ರಾಜ್ಯ - ಕೇಂದ್ರ ಸರ್ಕಾರದ ವೈದ್ಯಕೀಯ ತಂಡ, ಹಿರಿಯ ಅಧಿಕಾರಿಗಳ ತಂಡ ಸಂಡೂರು ಪಟ್ಟಣಕ್ಕೆ ಭೇಟಿ ನೀಡದೇ ಇದ್ದಿದ್ದು ಆಸ್ಪತ್ರೆಯ ಅವ್ಯವಸ್ಥೆಗೆ ಕಾರಣ ಎಂದೇ ಪರಿಗಣಿಸಲಾಗಿದೆ.

ತಾಲೂಕು ಕೇಂದ್ರವಾದ ಈ ಸಂಡೂರಲ್ಲಿ 75ಕ್ಕೂ ಹೆಚ್ಚಿನ ಗಣಿ ಕಂಪನಿಗಳು ಹಗಲಿರುಳೂ ಕೆಲಸ ಮಾಡುತ್ತಿವೆ. ಸಾವಿರಾರು ಟಿಪ್ಪರ್ ಲಾರಿಗಳು ಲೆಕ್ಕವಿಲ್ಲದಷ್ಟು ವೇಗವಾಗಿ ರಸ್ತೆಗಳ ಮೇಲೆ ಓಡಾಡುತ್ತವೆ. ಅಪಘಾತಗಳು, ಲಾರಿಗಳ ಸದ್ದುಗದ್ದಲ ಇಲ್ಲಿಯ ಜನರನ್ನು ದಿಗ್ಮೂಢರನ್ನಾಗಿ ಮಾಡಿವೆ.

ರೋಗಿಯೂ ಇಲ್ಲ, ವೈದ್ಯರೂ ಇಲ್ಲ :
ಗಣಿಯ ಕೆಂಧೂಳಿನಿಂದಾಗಿ ಅನಾರೋಗ್ಯ, ಆತಂಕ ಇಲ್ಲಿಯ ಜನರ ನಿತ್ಯದ ಸಮಸ್ಯೆಗಳು. ಹೊಟ್ಟೆಪಾಡಿಗಾಗಿ ಇಲ್ಲಿಯ ಜನ ಇಲ್ಲೇ ಇರಲು ಬಯಸುತ್ತಾರೆ. ಇಲ್ಲೇ ಇದ್ದು, ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ. ಬದುಕು ಮುಗಿಸುತ್ತಾರೆ. ಸಂಡೂರಲ್ಲಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಇದೆ. ಇದೆಯಷ್ಟೆ. ರೋಗಿಗಳು, ಅವರ ನರಳಾಟ, ವೈದ್ಯರು... ಊಹುಂ ಅದಾವುದೂ ಇಲ್ಲಿ ಕಾಣಸಿಗುವುದಿಲ್ಲ.

ಸರ್ಕಾರಿ ದಾಖಲೆಗಳ ಪ್ರಕಾರ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಸಂಖ್ಯೆ 12. ಕರ್ತವ್ಯಕ್ಕೆ ತಪ್ಪದೇ ಹಾಜರಾಗುವ ವೈದ್ಯರ ಸಂಖ್ಯೆ ಕೇವಲ 2. ಸದಾಕಾಲ ಗುಯ್ಗುಡುವ ನೊಣಗಳು, ಕಂಡಲ್ಲಿ ಕಾಣುವ ಕೊಳಚೆ, ಅಸಮರ್ಪಕ ನೀರು ಪೂರೈಕೆ ಈ ಆಸ್ಪತ್ರೆಗೇ ಚಿಕಿತ್ಸೆ ಕೊಡಬೇಕಾದ ನೈಜಸ್ಥಿತಿಯನ್ನು ತೋರುತ್ತದೆ.

ಶಸ್ತ್ರಚಿಕಿತ್ಸಾ ಘಟಕ, ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಾಗ ಅಥವಾ ಲೋಡ್‌ಶೆಡ್ಡಿಂಗ್ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಜನರೇಟರ್ ಸದಾಕಾಲ ಸುಸ್ಥಿತಿಯಲ್ಲಿ ಇರುವುದಿಲ್ಲ. ಶುದ್ಧವಾದ ಗಾಳಿ, ಆರೋಗ್ಯಕರ ಉಸಿರಾಟಕ್ಕಾಗಿ, ಸೊಳ್ಳೆಗಳನ್ನು ನಿಯಂತ್ರಿಸಲಿಕ್ಕಾಗಿ ಇರುವ ಫ್ಯಾನ್‌ಗಳು ಸದಾ ನಿಂತೇ ಇರುತ್ತವೆ!

ಇನ್ನು ವಿದ್ಯುತ್ ಲೈಟ್‌ಗಳು ಬೆಳಗುವುದೇ ಇಲ್ಲ. ಅಲ್ಲೊಂದು, ಇಲ್ಲೊಂದು ಲೈಟ್ ಬೆಳಗಿದರೂ ಕೂಡ ಕತ್ತಲಲ್ಲಿ ಕಣ್ಣುಬಿಟ್ಟು ಹುಡುಕಾಡಿದಂತೆ ಮಂದವಾಗಿರುತ್ತವೆ. ಬೆಡ್‌ಗಳ ಮೇಲಿನ ಹಾಸಿಗೆಗಳ ಹೊದಿಕೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದಿಲ್ಲ. ವಾರಗಟ್ಟಲೆ ಹೊದಿಕೆಗಳು ಇದ್ದು, ರೋಗಿಗಳು ಮತ್ತಷ್ಟು ಇನ್ಫೆಕ್ಷನ್ ಮತ್ತು ಇನ್ನಿತರೆ ರೀತಿಯ ಅನಾರೋಗ್ಯಕ್ಕೆ ತುತ್ತಾಗುವುದು ಸಹಜವಾಗಿದೆ.

ಸಂಡೂರು ಸುತ್ತಲೂ 35ಕ್ಕೂ ಹೆಚ್ಚಿನ ಹಳ್ಳಿಗಳಿದ್ದು, ಲಂಬಾಣಿ ಮತ್ತು ಬಡ, ದಲಿತ ವರ್ಗದ ಜನಗಳೇ ಇಲ್ಲಿ ಹೆಚ್ಚಿದ್ದು ಆಸ್ಪತ್ರೆಯನ್ನು ಸ್ವಚ್ಛವಾಗಿ ಇರಿಸಕೊಳ್ಳುವ ಉದ್ಧೇಶ ಯಾರಲ್ಲೂ ಇಲ್ಲ. ಆಸ್ಪತ್ರೆಯ ಸಿಬ್ಬಂದಿ ನೈರ್ಮಲ್ಯ - ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆಯನ್ನು ಬಳ್ಳಾರಿಯ ರಾಜಕಾರಣಿಯೊಬ್ಬರ ಬಂಟರಿಗೆ ಗುತ್ತಿಗೆ ನೀಡಲಾಗಿದೆ. ಇಲ್ಲಿ ರಾಜಕೀಯ ಮೇಲುಗೈ ಸಾಧಿಸಿ, ಜನಹಿತ, ಜನಸೇವೆ, ಜನಪರ ನಿಲುವುಗಳು ಅಧಿಕಾರಿಗಳು, ಸಿಬ್ಬಂದಿಯಲ್ಲಿ ಶೂನ್ಯವಾಗಿದೆ ಎಂದು ಕರವೇ ಆರೋಪಿಸಿದೆ.

108ಕ್ಕೇ ಚಿಕಿತ್ಸೆ : ತಾಲೂಕು ಕೇಂದ್ರವಾಗಿರುವ ಸಂಡೂರಲ್ಲಿ 108 ಸಂಖ್ಯೆಯ ವಾಹನಗಳು ಕನಿಷ್ಠ 10 ಆದರೂ ಇರಬೇಕು. ಎಲ್ಲಾ ವಾಹನಗಳು ಸದಾಕಾಲ ಸುಸಜ್ಜಿತವಾಗಿ, ತುರ್ತುಸೇವೆಗೆ ಸಿದ್ಧವಾಗಿ ಇರಬೇಕು. ಆದರೆ, ಇಲ್ಲಿಯ ವಾಹನಗಳು ಎಷ್ಟೇ ಇರಲಿ ಅವುಗಳು ಸದಾ ಔಷಧಿಗಳ ಕೊರತೆಯ ಸಮಸ್ಯೆಗಳನ್ನು ಎದುರಿಸುತ್ತಿವೆ.

ಇನ್ನೂ ಕೆಲ ಸಂದರ್ಭಗಳಲ್ಲಿ ವಾಹನ ಇರುತ್ತದೆ. ಚಾಲಕರು ಇರುವುದಿಲ್ಲ. ಇಂಥಹ ಅನೇಕ ಸಮಸ್ಯೆಗಳನ್ನು ಸಂಡೂರು ಜನರು ಮೌನವಾಗಿಯೇ ಅನುಭವಿಸುತ್ತಿದ್ದಾರೆ. ಸ್ಥಳೀಯವಾಗಿರುವ ಶಾಸಕ ತುಕಾರಾಂ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಅಭಿವೃದ್ಧಿ, ಇಲ್ಲಿಯ ಜನರ ಬೇಕು - ಬೇಡಗಳತ್ತ ಜಿಲ್ಲಾಡಳಿತ ಹೆಚ್ಚಿನ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಕರವೇ ಸದಸ್ಯ ಪಿ. ರಾಜು.

ಈ ಎಲ್ಲಾ ಸಮಸ್ಯೆಗಳ ಸಾಕ್ಷ್ಯಗಳನ್ನು ಒಳಗೊಂಡ ಛಾಯಾಚಿತ್ರಗಳ ಗುಚ್ಚವನ್ನೇ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಮತ್ತು ಕಂದಾಯ ಸಚಿವ ಜಿ. ಸೋಮಶೇಖರರೆಡ್ಡಿ ಅವರಿಗೆ ಕರವೇಯ ಎಸ್. ಸುರೇಶ್, ಪಿ. ರಾಜು ಮತ್ತು ಪದಾಧಿಕಾರಿಗಳು ಸಲ್ಲಿಸಿದ್ದರೂ ಆಸ್ಪತ್ರೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀಕಾಂತ ಬಾಸೂರ ಅವರು ಕೂಡ ಇತ್ತ ಗಮನಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+