ಮಂಗಳೂರು ಎಸ್‌ಇಝಡ್: ಪೇಜಾವರ ಶ್ರೀ ಹೋರಾಟಕ್ಕೆ ಜಯ?

ಎಸ್‌ಇಝಡ್‌ನ ಎರಡನೇ ಹಂತಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಸುಮಾರು 1,400 ಎಕರೆ ಭೂಮಿಯನ್ನು ವಾಪಸ್ ನೀಡಲು ರಾಜ್ಯ ಸರ್ಕಾರ ಬಹುತೇಕ ತೀರ್ಮಾನಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಈ ಬಗ್ಗೆ ಭಾನುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಗಳೂರಿನ ಎಸ್‌ಇಝಡ್‌ನ 2ನೇ ಹಂತಕ್ಕಾಗಿ ಸರ್ಕಾರ 1,400 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಸ್ವಾಧೀನದ ವಿರುದ್ಧ ಪೇಜಾವರಶ್ರೀ ನೇತೃತ್ವದಲ್ಲಿ ಕಳೆದ ಹಲವು ತಿಂಗಳುಗಳಿಂದ ತೀವ್ರ ಹೋರಾಟ ನಡೆಯುತ್ತಿದೆ. ಹಿಂದೊಮ್ಮೆ ಪೇಜಾವರ ಶ್ರೀಗಳು ಧರಣಿ ನಡೆಸಲೂ ಮುಂದಾಗಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದರಿಂದ ಧರಣಿಯನ್ನು ವಾಪಸ್ ಪಡೆಯಲಾಗಿತ್ತು.
ಆದರೆ, ಭರವಸೆ ಈಡೇರುವ ಲಕ್ಷಣ ಕಾಣದೇ ಇದ್ದ ಹಿನ್ನೆಲೆಯಲ್ಲಿ ಜುಲೈ 13ರಿಂದ ಮತ್ತೆ ಧರಣಿ ನಡೆಸುವ ಎಚ್ಚರಿಕೆಯನ್ನು ಪೇಜಾವರ ಶ್ರೀಗಳು ನೀಡಿದ್ದರು. ಇದರಿಂದ ಸರ್ಕಾರ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ನಿವಾಸದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ಡಾ. ವಿ.ಎಸ್.ಆಚಾರ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರು ಪಾಲ್ಗೊಂಡಿದ್ದರು. ಸುಮಾರು ಹೊತ್ತು ಚರ್ಚೆ ನಡೆದ ನಂತರ ಎರಡನೇ ಹಂತದ ಯೋಜನೆಗಾಗಿ ವಶಪಡಿಸಿಕೊಂಡು ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.












Click it and Unblock the Notifications