ನಗೆಪಾಟಲಾದ ಯಡ್ಡಿ ಕುಮ್ಮಿ ಆಣೆ ಬಗ್ಗೆ ಯಾರು ಏನೆಂದರು?

ಸಿದ್ದರಾಮಯ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸಿ ಆಣೆ ಪ್ರಮಾಣಕ್ಕೆ ಮುಂದಾಗುತ್ತಿರುವುದು ನಾಚಿಕೆಗೇಡು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡೆದುಕೊಳ್ಳುತ್ತಿರುವ ರೀತಿಯು ಹಾಸ್ಯಾಸ್ಪದ.ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿದ್ದರೆ ಯಡಿಯೂರಪ್ಪ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕಿತ್ತು. ಸರ್ಕಾರದ ಹಣ ಬಳಸಿ ಜಾಹೀರಾತು ನೀಡಿರುವುದು ಖಂಡನೀಯ.
ಮಲ್ಲಿಕಾರ್ಜುನ ಖರ್ಗೆ: ಅವರವರ ಮನೆ ದೇವರ ಹೆಸರಿನ ಮುಂದೆ ಆಣೆ ಪ್ರಮಾಣ ಮಾಡುತ್ತಾ ಹೋದರೆ ಜನತೆ ಮುಂದೆ ತೆಗೆದುಕೊಂಡ ಪ್ರಮಾಣವಚನವನ್ನು ಹಿಂದಕ್ಕೆ ಪಡೆಯಲು ಸಾಧ್ಯವೆ. ಪ್ರಜಾಪ್ರಭುತ್ವದಲ್ಲಿ ಜನತೆಯೇ ಜನಾರ್ಧನ, ಜನರ ಮುಂದೆ ಪ್ರಮಾಣ ಮಾಡಿ. ಪ್ರಜಾಪ್ರಭುತ್ವದಲ್ಲಿ ಆಣೆ, ಪ್ರಮಾಣಗಳಿಗೆ ಜಾಗವಿಲ್ಲ.
ಎಚ್ ಡಿ ದೇವೇಗೌಡ: ಆಣೆ ಪ್ರಮಾಣವನ್ನು ಜನ ಈಗ ಒಪ್ಪುವುದಿಲ್ಲ. ರಾಜಕೀಯ ನಾಯಕರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಣೆ ಮಾಡುವುದು ಯಡಿಯೂರಪ್ಪ ಅವರಿಗೆ ಹೊಸದಲ್ಲ. ಹಿಂದೆ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮುಂದೆ ತಪ್ಪು ಮಾಡುವುದಿಲ್ಲ ಎಂದು ಆಣೆ ಮಾಡಿ, ಮುರಿದಿದ್ದಾರೆ. ಇಂಥವರನ್ನು ಜನ ಹೇಗೆ ನಂಬುತ್ತಾರೆ.
ಸಾಣೆಹಳ್ಳಿ ಪಂಡಿತಾರಾಧ್ಯಶ್ರೀಗಳು: ಇದು ಮೂರ್ಖತನದ ಪರಮಾವಧಿ. ಇವರಿಗೆ ಆತ್ಮಸಾಕ್ಷಿ ಇಲ್ಲ. ರಾಜಕಾರಣಿಗಳು ಭ್ರಷ್ಟಾಚಾರದ ಪರಮಾವಧಿಯನ್ನು ಮುಟ್ಟಿದ್ದಾರೆ. ಕಣ್ಣಿಲ್ಲದ, ಕಿವಿ ಇಲ್ಲದ, ಕಾಲಿಲ್ಲದ ದೇವರನ್ನು ನಂಬುವುದಕ್ಕಿಂತ ಜನರೇ ದೇವರೆಂದು ನಂಬಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿ. ದೇವರಿಂದ ರಾಜಕಾರಣಿಗಳಿಗೆ ಖಂಡಿತಾವಾಗಿ ಅನುಗ್ರಹ ಸಿಗುವುದಿಲ್ಲ.
ಮೋಟಮ್ಮ: ಈ ಹಿಂದೆ ದೇವೇಗೌಡರು ಹಾಗೂ ಬಂಗಾರಪ್ಪ ಅವರ ಮೇಲೆ ಆರೋಪಗಳು ಬಂದಾಗ ಅವರು ಆಣೆ, ಪ್ರಮಾಣ ಮಾಡಿರಲಿಲ್ಲ. ಈಗಿನ ಮುಖ್ಯಮಂತ್ರಿ ಇಂಥ ಕ್ರಮಕ್ಕೆ ಮುಂದಾಗಿರುವುದು ತಲೆತಗ್ಗಿಸುವಂಥದ್ದು. ಹಾಲಿ ಹಾಗೂ ಮಾಜಿ ಸಿಎಂಗಳ ವರ್ತನೆ ನಾಚಿಕೆಗೇಡಿನ ಸಂಗತಿ












Click it and Unblock the Notifications