ಹಂಗಿನ ಅರಮನೆಗಿಂತ ಕಾರ್ಪೊರೇಷನ್ ತೊಟ್ಟಿಯೇ ಲೇಸು!

ಇಂದಿನ ಈ ಕಥಾನಕಕ್ಕೆ ಈ ಚಿತ್ರದಲ್ಲಿರುವ ವ್ಯಕ್ತಿಯೇ ಕಥಾನಾಯಕ. ಶ್ರೀಮಂತಿಕೆ-ಬಡತನ, ಮೇಲು-ಕೀಳು, ದೌರ್ಜನ್ಯ-ಮಾನವೀಯತೆ ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಈತನೇ ಜ್ವಲಂತ ಸಾಕ್ಷಿ. ಈತನ ಹೆಸರು ಗೊತ್ತಿಲ್ಲ. ಅಂದಾಜು 25 - 28ರ ಮಧ್ಯದ ವಯಸ್ಸು. ನಿಖರವಾದ ಭಾಷೆ ಗೊತ್ತಿಲ್ಲ. ಆದರೂ ಮಾತನಾಡುತ್ತಾನೆ. ಎದುರಲ್ಲಿ ನಿಂತವರು ಮಾತನಾಡುವ ಎಲ್ಲಾ ಭಾಷೆಗಳನ್ನು ಮೌನವಾಗಿಯೇ ಆಲಿಸಿ, ಅರ್ಥ ಮಾಡಿಕೊಳ್ಳುತ್ತಾನೆ. ಸಂಜ್ಞೆಗಳನ್ನು ನೀಡುತ್ತಲೇ ಸ್ಪಂದಿಸುತ್ತಾನೆ. ಈ ತಿರುಕ ಕನಸುಗಳನ್ನು ಕಾಣುತ್ತಾನಾ? ಗೊತ್ತಿಲ್ಲ.
ಕೃಷವಾದ ದೇಹ. ಕುರುಚಲು ಗುಂಗರು ಕೂದಲಿನ ಗಡ್ಡ. ಹೆತ್ತವರು ಇದ್ದರೂ ಅನಾಥ. ಓರಗೆಯವರು ಇದ್ದೂ ಗೊತ್ತಿಲ್ಲ. ಬಂಧುವರ್ಗ, ಬದುಕಿನ ಜವಾಬ್ದಾರಿಗಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕಾದ ಈ ವಯಸ್ಸಲ್ಲಿ ಈತ ಬದುಕು ಸವೆಸುತ್ತಿರುವುದು ಮುನಿಸಿಪಾಲಿಟಿಯ ತೊಟ್ಟಿಯಲ್ಲಿ. ಕಸ ಸಂಗ್ರಹಿಸಲಿಕ್ಕಾಗಿ ಮುನಿಸಿಪಾಲಿಟಿಯವರು ರಸ್ತೆ ಬದಿಯಲ್ಲಿ ಇರಿಸಿದ್ದ ಕಬ್ಬಿಣದ ಡಬ್ಬಿಯೇ ಈತನ ಅರಮನೆ. ಹಂಗಿನ ಅರಮನೆಗಿಂತಲೂ ಮುನಿಸಿಪಾಲಿಟಿಯ ಈ ಡಬ್ಬವೇ ನನ್ನ ಸ್ವರ್ಗ ಎನ್ನುವಂತೆ ಅತ್ಯಂತ ನೆಮ್ಮದಿಯ ಬದುಕುಗಳನ್ನು ಸಾಗಿಸುತ್ತಿದ್ದ ಈ ಯುವಕ, ಇಂದು ನಿರಾಶ್ರಿತರ ಕೇಂದ್ರದ ಪಾಲಾಗಿದ್ದಾನೆ.
ಹೊದ್ದು ಮಲಗಲು ಹಾಸಿಗೆ, ಬೆಡ್‌ಶೀಟುಗಳಿಲ್ಲ. ಸಿಂಗರಿಸಿಕೊಂಡು ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಲು ಬಟ್ಟೆಗಳಿಲ್ಲ. ಮುನಿಸಿಪಾಲಿಟಿ ಡಬ್ಬಕ್ಕೆ ಅವರಿವರು ಎಸೆಯುವ ಮುಸುರೆಯೇ ಈತನ ಮೃಷ್ಟಾನ್ನ ಭೋಜನ. ತರಹೇವಾರಿ ರುಚಿಗಳನ್ನು ಆಸ್ವಾದಿಸುತ್ತಲೇ ಡಬ್ಬದ ಮೂಲೆಯಲ್ಲಿ ನಿದ್ರಿಸುವುದೇ ಕಾಯಕ. ಆಗೊಮ್ಮೆ ಈಗೊಮ್ಮೆ ಸೂರ್ಯನತ್ತ ಮುಖಮಾಡಿ ರಸ್ತೆಯಲ್ಲಿ ಹೆಜ್ಜೆಗಳನ್ನಿಟ್ಟಾಗಲೇ ಆತನಿಗೆ ಹೊರ ಪ್ರಪಂಚದ ಸಂಪರ್ಕ. ಅವರಿವರ ಬಳಿ ಕೈವೊಡ್ಡಿ ಕೇಳಿದಾಗ ಅವರು ನೀಡುವ ಭಿಕ್ಷೆಯೇ ಬ್ಯಾಂಕ್ ಬ್ಯಾಲನ್ಸ್. ಎದುರಲ್ಲಿದ್ದವರು ಬೈಯ್ದಾಗ, ಸಿಂಡರಿಸಿಕೊಂಡಾಗ, ಗಾಬರಿಗೊಂಡಾಗಲೂ ಹಸನ್ಮುಖಿಯಾಗಿರುವುದೇ ಈತನ ಆಸ್ತಿ.
ಈ ಯುವಕ ಕಳೆದ 15-20 ದಿನಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ 5ನೇ ಕ್ರಾಸ್‌ನಲ್ಲಿಯ ದಾರಿಹೋಕರ ಗಮನ ಸೆಳೆದಿದ್ದಾನೆ. ಕೆಲವರು ವೀಕ್ಷಿಸಿದ್ದಾರೆ, ಕೆಲವರು ನಿರ್ಲಕ್ಷಿಸಿದ್ದಾರೆ. ಆದರೆ, ಪಾಲಿಕೆಯ ಉಪ ಮೇಯರ್ ಶಶಿಕಲಾ ಕನಿಕರ ತೋರಿ ಜೂ.13, ಸೋಮವಾರ ಬೆಳಿಗ್ಗೆ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದಾರೆ. ನಿರಾಶ್ರಿತರ ಕೇಂದ್ರದ ರಾಜ್ಯಾಧ್ಯಕ್ಷ, ಬಳ್ಳಾರಿ ನಿವಾಸಿ ಕೆ.ಎ. ರಾಮಲಿಂಗಪ್ಪ, ಉಪ ಮೇಯರ್ ಶಶಿಕಲಾ ಅವರು ಮಾನವೀಯತೆ ತೋರಿ ಈ ಯುವಕನನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದಾರೆ. ಈತನ ಬದುಕಿನಲ್ಲಿ ಈ ಕ್ಷಣದಿಂದ ಹೊಸ ಅಧ್ಯಾಯ ಪ್ರಾರಂಭವಾಗಿದೆ.












Click it and Unblock the Notifications