ಜನಾರ್ದನ ದ್ವಿವೇದಿ ಮೇಲೆ ಚಪ್ಪಲಿ ದಾಳಿಗೆ ಯತ್ನ

ಇಂದು ಮಧ್ಯಾಹ್ನ ಕಾಂಗ್ರೆಸ್ ಕಚೇರಿಯಲ್ಲಿ ಜನಾರ್ದನ ದ್ವಿವೇದಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬಂಧಿತನಾಗಿರುವ ಸುನೀಲ್ ಕುಮಾರ್ ಎಂಬವ ತಾನು ರಾಜಸ್ತಾನದ ನವನಿರ್ಮಾಣ ಪತ್ರಿಕೆಯ ಪತ್ರಕರ್ತ ಎಂದು ಹೇಳಿಕೊಂಡಿದ್ದಾನೆ. ಆದರೆ, ಪತ್ರಿಕೆಗೂ ಆತನಿಗೂ ಸಂಬಂಧವಿಲ್ಲ ಎಂದು ಪತ್ರಿಕೆ ಸ್ಪಷ್ಟನೆ ನೀಡಿದೆ.
ವೇದಿಕೆಯ ಮೇಲೇರಿ ಕೈಯಲ್ಲಿ ಪಾದರಕ್ಷೆಯನ್ನು ಝಳಪಿಸಿದ ಸುನೀಲ್ ಕುಮಾರ್, ದ್ವಿವೇದಿ ಅವರನ್ನು ಹೊಡೆಯಲು ಯತ್ನಿಸುವ ಮೊದಲೇ ಭದ್ರತಾದಳದವರು ಆತನನ್ನು ಬಂಧಿಸಿದರು. ಕೆಲ ಕಾರ್ಯಕರ್ತರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದರು. ಸುನೀಲ್ ಕುಮಾರ್ ಪತ್ರಕರ್ತ ಎಂಬ ಸೋಗಿನಲ್ಲಿ ಬಂದಿದ್ದ ಎಂದು ತಿಳಿದುಬಂದಿದೆ.
ಚಪ್ಪಲಿ ದಾಳಿಗೊಳಗಾದವರು : ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಸುರೇಶ್ ಕಲ್ಮಾಡಿಯವರ ಮೇಲೆ ಕೂಡ ಕಳೆದ ಏಪ್ರಿಲ್ ನಲ್ಲಿ ಚಪ್ಪಲಿ ಎಸೆಯಲಾಗಿತ್ತು. ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ರಿಂದ ಹಿಡಿದು, ಗೃಹ ಸಚಿವ ಪಿ ಚಿದಂಬರಂ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, ಬಿಡದಿ ಸ್ವಾಮಿ ನಿತ್ಯಾನಂದ, ಕಾಂಗ್ರೆಸ್ ಸಂಸದ ಜಿಂದಾಲ್, ಬ್ರಿಟನ್ ಮಾಜಿ ಪ್ರಧಾನ್ ಟೋನಿ ಬ್ಲೇರ್, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮುಂತಾದವರ ಮೇಲೆ ಉಗ್ರ ವಿರೋಧಿಗಳಿಂದ ಚಪ್ಪಲಿ ಎಸೆಯಲಾಗಿದೆ.












Click it and Unblock the Notifications