ಬಾಬಾ ವಿರುದ್ಧ ಶಾರುಖ್ ಹೇಳಿಕೆಗೆ ಸೇನೆ ಖಂಡನೆ

ತಮಗೆ ಸಂಬಂಧವಿರದ ವಿಷಯಗಳನ್ನು ಜನ ಮೂಗು ತೂರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿದೇಶಗಳಲ್ಲಿರುವ ಕಪ್ಪು ಹಣ ಭಾರತಕ್ಕೆ ತರಲು ಬಾಬಾ ಯತ್ನಿಸಿದರೆ ಶಾರುಖ್ ಗೆ ಯಾಕೆ ಕೋಪ ಎಂದು ಸೇನಾ ಸಂಸದ ಸಂಜಯ್ ರೌತ್ ಪ್ರಶ್ನಿಸಿದ್ದಾರೆ.
'ಬಾಬಾ ಅವರ ಭಾರತ್ ಸ್ವಾಭಿಮಾನ್ ಪಕ್ಷಕ್ಕೆ ಪ್ರಚಾರ ಕಮ್ಮಿಯಾಗಿರುವುದರಿಂದ ಈ ರೀತಿ ರಾಜಕೀಯ ಪ್ರೇರಿತ ಉಪವಾಸ ಸತ್ಯಾಗ್ರಹವನ್ನು ರಾಮ್ ದೇವ್ ಅವರು ಹಮ್ಮಿಕೊಂಡಿದ್ದಾರೆ. ನಾನು ಅವರಿಗೆ ಬೆಂಬಲ ನೀಡುವುದಿಲ್ಲ' ಎಂದು ರಾಒನ್ ಚಿತ್ರದ ಪ್ರಚಾರಕ್ಕಾಗಿ ಇಂದೋರ್ ಗೆ ಬಂದಿದ್ದ ಶಾರುಖ್ ಹೇಳಿದ್ದರು.
ಬಾಲಿವುಡ್ ಈಗ ಕಪ್ಪು ಹಣದಿಂದ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಜನತೆಯ ದುಡ್ಡು ಬಳಸಿ ಮಜಾ ಮಾಡುವ ಸಿನಿಮಾ ಮಂದಿಗೂ ಬಾಬಾ ಅವರ ಸತ್ಯಾಗ್ರಹದಿಂದ ಚುರುಕು ಮುಟ್ಟಿರುವುದಂತೂ ಸತ್ಯ. ರಾಜಕಾರಣಿ, ಉದ್ಯಮಿ ಅಥವಾ ಸಿನಿಮಾ ನಟ ನಟಿಯರಾಗಲಿ ಯಾರೇ ಆದರೂ ದೇಶಕ್ಕೆ ದ್ರೋಹ ಬಗೆಯುವವರಿಗೆ ತಕ್ಕ ಶಿಕ್ಷೆಯಾಗಬೇಕು. ಶಾರುಖ್ ಗೆ ಇರುವ ರಾಜಕೀಯ ಸಂಪರ್ಕಗಳ ಬಗ್ಗೆ ನಮಗೆ ತಿಳಿದಿದೆ ಎಂದು ರೌತ್ ಹೇಳಿದ್ದಾರೆ.
ಪಾಕಿಸ್ತಾನಿ ಕ್ರಿಕೆಟರ್ ಗಳತ್ತ ಶಾರುಖ್ ಒಲವು. ನಟನೆ ಬಿಟ್ಟು ಕ್ರಿಕೆಟ್ ಅಂಗಳಕ್ಕೆ ಇಳಿದು ಅಲ್ಲಿನ ಪರಿಸರವನ್ನು ಒಂದಿಷ್ಟು ರಾಡಿ ಮಾಡಿ ನಷ್ಟ ಅನುಭವಿಸಿರುವ ಶಾರುಖ್ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲಿ ನಂತರ ಬೇರೆಯವರ ಬಗ್ಗೆ ಮಾತಾಡಲಿ ಎಂದು ಶಿವಸೇನೆ ಹೇಳಿದೆ. ಐಪಿಎಲ್ ನಲ್ಲಿ ಪಾಕಿಸ್ತಾನ ಆಟಗಾರರನ್ನು ಸೇರಿಸಿಕೊಳ್ಳುವುದನ್ನು ಶಿವಸೇನೆ ಬಲವಾಗಿ ಖಂಡಿಸಿತ್ತು. ಆದರೆ, ಶಾರುಖ್ ಪಾಕಿಸ್ತಾನ ಆಟಗಾರರತ್ತ ಒಲವು ತೋರಿಸಿದ್ದರು.












Click it and Unblock the Notifications