ಮುಂಗಾರು ಆರಂಭ : ಕೊಡಗಿನಲ್ಲಿ ಕೊಡೆ ಹಿಡಿದು ನಡೆ

ಕಳೆದ ವರ್ಷ ತಡವಾಗಿ ಮುಂಗಾರು ಆರಂಭಗೊಂಡಿದ್ದರಿಂದ ರೈತರು ಪರದಾಡುವಂತಾಗಿತ್ತು. ಆದರೆ ಈ ಬಾರಿ ವಾಡಿಕೆಯಂತೆ ಮಳೆ ಆರಂಭವಾಗಿರುವುದರಿಂದ ಬೆಳೆಗಾರರು ಉತ್ಸಾಹದಿಂದ ಕೃಷಿಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಆದರೆ, ಕೆಲವರು ಸಿದ್ಧತೆ ಮಾಡಿಕೊಳ್ಳದಿದ್ದರಿಂದ ಆತಂಕಕ್ಕೂ ಈಡಾಗಿದ್ದಾರೆ.
ಕೃಷಿ ಚಟುವಟಿಕೆ ಚುರುಕು : ಮುಂಗಾರು ಮಳೆಯನ್ನೇ ನಂಬಿ ಭತ್ತ ಬೆಳೆಯುವ ಇಲ್ಲಿನ ಕೃಷಿಕರು ಮಳೆಬಿದ್ದು ಮಣ್ಣು ಹದವಾಗುತ್ತಿದ್ದಂತೆ ಗದ್ದೆ ಉಳುಮೆಯಲ್ಲಿ ತೊಡಗಿರುವ ದೃಶ್ಯ ಕಂಡು ಬರತೊಡಗಿದೆ. ಕೆಲವರು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದರೆ ಇನ್ನು ಕೆಲವರು ಎತ್ತುಗಳಿಂದ ಉಳುಮೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಕಾಫಿ ತೋಟದ ಕೆಲಸವೂ ಭರದಿಂದ ನಡೆಯುತ್ತಿದೆ. ಗೊಬ್ಬರ ಹಾಕುವುದು, ನೆರಳು ತೆಗೆಯುವುದು ಮುಂತಾದ ಕೆಲಸಗಳನ್ನು ಮಾಡಲೇ ಬೇಕಾಗಿರುವುದರಿಂದ ಬೆಳೆಗಾರರು ಕೂಲಿ ಕಾರ್ಮಿಕರ ಮೊರೆ ಹೋಗಿದ್ದಾರೆ. ಆದರೆ ಕಾರ್ಮಿಕರ ಕೊರತೆಯೂ ಬೆಳೆಗಾರರನ್ನು ಕಾಡುತ್ತಿದೆ. ಹೀಗಾಗಿ ಕೆಲವರು ದೂರದ ಊರುಗಳಿಂದ ಕಾರ್ಮಿಕರನ್ನು ಕರೆತಂದು ದುಪ್ಪಟ್ಟು ಕೂಲಿ ನೀಡಿ ಕೆಲಸ ಮಾಡಿಸುತ್ತಿದ್ದಾರೆ.
ಪ್ರಕೃತಿ ವಿಕೋಪ ತಡೆಗೆ ಕ್ರಮ : ಮಳೆಗಾಲ ಆರಂಭವಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅದನ್ನು ಎದುರಿಸಲು ಸಮಗ್ರ ಕ್ರಮಕ್ಕೆ ಈಗಾಗಲೇ ಜಿಲ್ಲಾಡಳಿತ ಸನ್ನದ್ಧವಾಗಿದೆ. ಈ ಕುರಿತಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುವುದರ ಕುರಿತು ಸಭೆ ನಡೆಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಲಾಗಿದೆ.











Click it and Unblock the Notifications