ರಾಜ್ಯಪಾಲರಿಗೆ ಮಾತಿನ ಚುರುಕು ಮುಟ್ಟಿಸಿದ ಈಶ್ವರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಜನಾರ್ದನ ರೆಡ್ಡಿ, ಆರ್ ಅಶೋಕ್, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ ಮುಂತಾದ ಹಿರಿಯ ಶಾಸಕರು ಧರಣಿಯಲ್ಲಿ ಕುಳಿತಿದ್ದಾರೆ. ವೈಷ್ಣೋದೇವಿಯ ಆಶೀರ್ವಾದ ಪಡೆದು ಹಿಂದಿರುಗಿರುವ ಯಡಿಯೂರಪ್ಪ ಧರಣಿಯಲ್ಲಿ ಪಾಲ್ಗೊಂಡಿಲ್ಲ. ಬಿಜೆಪಿ ಪರವಾಗಿ ರಾಜ್ಯಪಾಲರ ವಿರುದ್ಧ ವಾಗ್ದಾಳಿ ಮಾಡಿದ ಈಶ್ವರಪ್ಪ, ಹಂಸರಾಜ್ ಅವರನ್ನು ಉಗ್ರ ಮಾತುಗಳಿಂದ ತರಾಟೆಗೆ ತೆಗೆದುಕೊಂಡರು. ಅನಂತಕುಮಾರ್ ಅವರೇ ತಮ್ಮ ನಾಯಕರೆಂದು ಪದೇಪದೇ ಪ್ರಸ್ತಾಪಿಸುತ್ತಿದ್ದರು.
ರಾಜ್ಯಪಾಲರು ತಮ್ಮ ಅಸಂವಿಧಾನಾತ್ಮಕ ನಡೆಯಿಂದ ಮತ್ತು ಹಠಮಾರಿತನದಿಂದ ರಾಜ್ಯವನ್ನು ಮಾತ್ರವಲ್ಲ ಕೇಂದ್ರ ಸರಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಯಡಿಯೂರಪ್ಪ ಕೆಳಗಿಳಿಯುವ ಅಥವಾ ಬೋಪಯ್ಯ ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ. ರಾಜೀನಾಮೆ ನೀಡಬೇಕಾಗಿರುವವರು ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ಎಂದು ಕಠಿಣ ಮಾತುಗಳಲ್ಲಿ ವಾಗ್ದಾಳಿ ಮಾಡಿದರು.
ವಿರೋಧ ಪಕ್ಷದ ನಾಯಕರಾದ ದೇವೇಗೌಡ, ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಕೂಡ ದಾಳಿಯ ಗುರಿಯನ್ನಾಗಿ ಮಾಡಿಕೊಂಡ ಈಶ್ವರಪ್ಪ, ರಾಜ್ಯಪಾಲರಿಗೆ ಬರೀ ಹೂಗುಚ್ಛ ಕೊಡೋಕೆ ಮೂರು ಗಂಟೆ ತೆಗೆದುಕೊಂಡ ಈ ಮೂವರು ರಾಜಕಾರಣಿಗಳಾಗೋದಕ್ಕೆ ಅಯೋಗ್ಯರು ಎಂದು ತರಾಮರಿ ಬೈದರು. ಇವರೆಲ್ಲ ಬಿಜೆಪಿ ಸರಕಾರ ಇಳಿಸೋದಕ್ಕೆ ಹೊರಟಿದ್ದಾರಲ್ಲ, ಯಡಿಯೂರಪ್ಪ ನಾಯಕರಾಗಿರುವವರೆಗೆ ಇದು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಿರ್ನಾಮವಾಗಿ ಹೋಗುತ್ತದೆ ಎಂದು ಹೇಳಿದರು.











Click it and Unblock the Notifications