ಮಗಳ ಕೊಂದು ನೇಣಿಗೆ ಶರಣಾದ ಇನ್ಫೋಸಿಸ್ ಟೆಕ್ಕಿ

ಸಂತೋಷ್ 6 ವರ್ಷಗಳ ಹಿಂದೆ ಸುಷ್ಮಾ ಎಂಬವರನ್ನು ಮದುವೆಯಾಗಿ ಸಂತೋಷದಿಂದಲೇ ಇದ್ದ. ಆಕೆಯೂ ಸಾಫ್ಟ್ ವೇರ್ ಉದ್ಯೋಗಿ. ಇಬ್ಬರಿಗೂ ಕೈತುಂಬಾ ಕೆಲಸ. ಆದರೆ ಏನು ಮಾಡುವುದು ಕಾಸಿಗೆ ತಕ್ಕಂತೆ ಮೈತುಂಬಾ ಕೆಲಸವೂ ಇತ್ತು. ತುರಿಸಿಕೊಳ್ಳಲೂ ಇಬ್ಬರಿಗೂ ಪುರೊಸೊತ್ತಿರಲಿಲ್ಲ. ಜತೆಗೆ ಸಂತೋಷ್ ಸ್ವಲ್ಪ ಮುಂಗೋಪಿ.
ಕೆಲಸದ ಒತ್ತಡದಿಂದ ಖಿನ್ನತೆ ಬಳುವಳಿಯಾಗಿತ್ತು. ಕಚೇರಿ ವಹಿಸುತ್ತಿದ್ದ ಕೆಲಸದ ಬಗ್ಗೆಯೇ ಸದಾ ಚಿಂತಿಸುತ್ತಿದ್ದ. ಕಂಪನಿ ವಹಿಸಿಕೊಟ್ಟಿದ್ದ ಕೆಲಸವನ್ನು ಸಕಾಲದಲ್ಲಿ ನಿಭಾಯಿಸಲಾಗದೆ ಅಧೀರನಾಗಿದ್ದ. ಪ್ರಾಜೆಕ್ಟ್ ವರ್ಕ್ ಪೂರ್ಣಗೊಳಿಸಲಾಗದೆ ಸಂತೋಷ್ ಚಡಪಡಿಸುತ್ತಿದ್ದ. ಈ ವಿಷಯವಾಗಿ ಕಂಪನಿಯ ಮ್ಯಾನೇಜರ್ ಕ್ಯಾತೆ ತೆಗೆದಿದ್ದ. ಕೋಪಗೊಂಡ ಸಂತೋಷ್ ಮೇ 16ರಂದು ರಾಜೀನಾಮೆ ನೀಡಿದ್ದ.
ಆದರೆ ಮಾರನೆಯ ದಿನವೇ ಕಚೇರಿಗೆ ತೆರಳಿ ರಾಜೀನಾಮೆ ವಾಪಸು ಪಡೆಯುವುದಾಗಿ ಮ್ಯಾನೇಜರ್ ಮುಂದೆ ಗೋಗರೆದ. ಆದರೆ ಮಹಾನುಭಾವ ಮ್ಯಾನೇಜರ್ ಇದಕ್ಕೆ ಸೊಪ್ಪುಹಾಕಲಿಲ್ಲ. ಸರಿ. ಸೀದಾ ನೆಗೆ ಬಂದವನೆ ಮಂಳವಾರ ರಾತ್ರಿ ಮಗಳ ಕುತ್ತಿಗೆಗೆ ಟವಲ್ ಬಿಗಿದು ಬಳಿಕ ತಾನೂ ಫ್ಯಾನಿಗೆ ನೇಣು ಹಾಕಿಕೊಂಡು ಇಹಲೋಕದ ವ್ಯಾಪಾರದಿಂದ ಮುಕ್ತಿ ಪಡೆದ.
ಅದಕ್ಕೂ ಮುನ್ನ ಪತ್ನಿ ಮಲಗಿದ ನಂತರ ಮಗುವನ್ನು ಬೇರೆ ಕೊಠಡಿಗೆ ಕರೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ 3 ಗಂಟೆಗೆ ಎಚ್ಚರಗೊಂಡ ಸುಷ್ಮಾ, ಮಗು ಮತ್ತು ಪತಿ ಕಾಣದಿದ್ದರಿಂದ ಹುಡುಕಾಟ ಆರಂಭಿಸಿದ್ದಾರೆ. ಪಕ್ಕದ ಕೋಣೆಯಲ್ಲಿ ಚಿಲಕ ಹಾಕಿಕೊಂಡು ಸಂತೋಷ್ ನೇಣಿಗೆ ಗೋಣು ಕೊಟ್ಟಿರುವುದು ಸುಷ್ಮಾ ಅರಿವಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಡಾ. ಹರ್ಷ ಗುಪ್ತ, ಪರಪ್ಪನ ಅಗ್ರಹಾರ ಠಾಣೆಯ ಇನ್ಸ್ ಪೆಕ್ಟರ್ ವಿ.ಕೆ. ವಾಸುದೇವ್ ಆಗಮಿಸಿ ಪರಿಶೀಲನೆ ನಡೆಸಿದರು.












Click it and Unblock the Notifications