ರಾಜಕೀಯ ದೊಂಬರಾಟ: ಅಸಲಿಗೆ ರಾಜ್ಯಪಾಲರ ಹುದ್ದೆ ಬೇಕಾ?

ಆದರೆ ಇದನ್ನು ನೆಪವಾಗಿಸಿಕೊಂಡು ಘನವೆತ್ತ ರಾಜ್ಯಪಾಲ, ಸನ್ಮಾನ್ಯ ಎಚ್. ಆರ್. ಭಾರದ್ವಾಜ್ ನಡೆಸುತ್ತಿರುವ ದೊಂಬರಾಟ ನೋಡಿದರೆ ಯಾಕಾಗಿ ಈ ಘನವೆತ್ತ ಹುದ್ದೆ ಬೇಕು ಎನಿಸದಿರದು. ವಿವೇಚನಾರಹಿತ, ವಿತಂಡವಾದದ ಪ್ರಶ್ನೆ ಇದಲ್ಲ. ವಾಸ್ತವಕ್ಕೆ ಹಿಡಿದ ಕನ್ನಡಿಯಷ್ಟೆ.
ಇಷ್ಟಕ್ಕೂ ನಾವಿನ್ನೂ ಯಾವ ಕಾಲದಲ್ಲಿದ್ದೇವೆ. ಅದೇ ಬ್ರಿಟಿಷರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸೃಷ್ಟಿಸಿದ್ದ ಗವರ್ನರ್ ವ್ಯವಸ್ಥೆಯನ್ನು ನಾವ್ಯಾಕೆ ಇನ್ನೂ ಪೋಷಿಸಬೇಕು. ಇಂದಿನ ಕಾರ್ಪೊರೇಟ್ ವರ್ಕ್ ಕಲ್ಚರ್, ಖಾಸಗೀಕರಣಗಳ ಭರಾಟೆಯಲ್ಲಿ ಇಂತಹ ಅಷಡ್ಡಾಳ ಹುದ್ದೆ ಬೇಕಾ?
ಸಂವಿಧಾನದಲ್ಲಿ ಯಾವ ಘನ ಉದ್ದೇಶವಿಟ್ಟುಕೊಂಡು ರಾಜ್ಯಪಾಲ ಹುದ್ದೆಯನ್ನು ಸೃಷ್ಟಿಸಿದರೋ ಅದರ ಧ್ಯೇಯೋದ್ದೇಶಗಳು ಈ ರಾಜ್ಯಪಾಲರುಗಳಿಂದ ಈಡೇರುತ್ತಿವೆಯೇ? ಅಸಲಿಗೆ ಇಂದಿನ ಕಾಲಮಾನದಲ್ಲಿ ಈ ಹುದ್ದೆ ಇರಬೇಕೇ? ಇದೊಂದು ಸರ್ವಾಲಂಕೃತ ಹುದ್ದೆ. ರಾಜಭವನವೆಂಬುದು ಜನಸಾಮಾನ್ಯರು ಕಟ್ಟುವ ತೆರಿಗೆಗಳಿಂದ ನಡೆಯುವ ಭಿಕ್ಷಾಕೇಂದ್ರಗಳು ಎನ್ನದೆ ವಿಧಿಯಿಲ್ಲ. ಈ ಬಿಳೀಯಾನೆಗಳು ಶ್ವೇತಭವನಗಳಲ್ಲಿ ಅಕ್ಷರಶಃ ಐಷಾರಾಮಿ ಜೀವನ ನಡೆಸುತ್ತಿರುವುದನ್ನು ನೋಡಿದಾಗ ಶ್ರೀಸಾಮಾನ್ಯನಿಗೆ ಬಾಯಿ ಬಾಯಿ ಬೊಡೆದುಕೊಳ್ಳುವಂತಾಗುತ್ತದೆ.
ಅಸಲಿಗೆ ಈ ರಾಜ್ಯಪಾಲರು ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಅವರಿಗೆ ಅಂತಹ ಸ್ಥಾನಮಾನಗಳನ್ನು ಕೊಡಮಾಡಬೇಕು? ಇವರಿಂದ ರಾಜ್ಯ ಸರಕಾರಗಳ ಆಡಳಿತಕ್ಕೆ value addition ಎಂಬುದೇನಾದರೂ ಆಗುತ್ತಿದೆಯೇ? ಕೇಂದ್ರ ಸರಕಾರಗಳ ಚಿತಾವಣೆಯ ಮೇರೆಗೆ ಅಥವಾ ಸ್ವಪ್ರತಿಷ್ಠೆಯಿಂದ ರಾಜ್ಯಪಾಲರು ಹದ್ದುಮೀರಿ ವರ್ತಿಸಿದಾಗಲೆಲ್ಲ ಕೋರ್ಟ್ ಗಳು ಕಿವಿ ಹಿಂಡಿ ಅವರನ್ನು ಸರಿ ದಾರಿಗೆ ತರುವ ಜವಾಬ್ದಾರಿ ನಿಭಾಯಿಸುತ್ತಿವೆ.
ಹಾಗಿರುವಾಗ ಯಾವ ಪುರುಷಾರ್ಥಕ್ಕಾಗಿ ಈ ಬಿಳಿಯಾನೆಗಳೆಂಬ ರಾಜ್ಯಪಾಲರು ಬೇಕು? ಇದು ರಾಜಭವನದ ಎದುರು ಆಕಾಶವಾಣಿಯ ಕಾಂಪೌಂಡ್ ಗೆ ಆನಿಕೊಂಡು ವಾಸ್ತವದ ನೆಲೆಗಟ್ಟಿನಲ್ಲಿ ನಡುಬೀದಿ ನಾರಾಯಣ ಎತ್ತಿರುವ ಸರಳಾತಿಸರಳ ಪ್ರಶ್ನೆ ಎಂದುಕೊಳ್ಳಿ.
ರಾಜ್ಯ ಸರಕಾರಗಳು ತಪ್ಪು ಮಾರ್ಗ ಅನುಸರಿಸಿದಾಗ ನೇರವಾಗಿ ಕೋರ್ಟ್ ಗಳೇ ಕಾನೂನು ದಂಡವನ್ನು ಝಳಪಿಸಿವೆ. ಮಧ್ಯೆ ಈ ಬಿಳಿಯಾನೆ ಏಕೆ ಬೇಕು? ರಾಜ್ಯ ಸರಕಾರಗಳು ತಪ್ಪು ದಾರಿ ತುಳಿದಾಗ ಅವುಗಳನ್ನು ಸರಿ ದಾರಿಗೆ ತರುವ ಮಾತಾಗಲಿ ಅಥವಾ ರಾಜ್ಯಗಳ ಆಡಳಿತವನ್ನು ಚುರುಕುಗೊಳಿಸಲು ರಾಜ್ಯಪಾಲರು ಇರಬೇಕು ಎಂಬ ವಾದ ಒಪ್ಪತಕ್ಕ ವಿಷಯವೇ ಅಲ್ಲ. ಅಂತಹ ಉದಾಹರಣೆಗಳು ಇದುವರೆಗೆ ಒಂದೂ ಕಂಡುಬಂದಿಲ್ಲ.
ಹಾಗೇನಾದರೂ ತಿಳಿದುಕೊಂಡು ರಾಜ್ಯಪಾಲರ ಹುದ್ದೆ ಬೇಕೆಂದು ವಾದಿಸುವಂತಿದ್ದರೆ ಯಾರ ಕಿವಿಯ ಮೇಲೆ ಲಾಲ್ ಬಾಗ್, ಕಬ್ಬನ್ ಪಾರ್ಕ್ ಇಡಲು ಇವರು ಪ್ರಯತ್ನಿಸುತ್ತಿದ್ದಾರೆ ಎಂದು ಕೇಳದೆ ವಿಧಿಯಿಲ್ಲ. ಒಬ್ಬ ರಾಚಯ್ಯ, ಒಬ್ಬ ರಮಾದೇವಿಯೋ ರಾಜ್ಯಪಾಲರ ಘನತೆ ಎತ್ತಿಹಿಡಿದವರಾಗಿ ಕಂಡುಬರುತ್ತಾರೆ. ಉಳಿದವರೆಲ್ಲ ಏನು ಕಿಸಿದಿದ್ದಾರೋ ಆ ಭಗವಂತನೇ ಬಲ್ಲ.
ಬೆಂಗಳೂರಿನಲ್ಲಿರುವ ರಾಜ ಭವನವೆಂಬ ವಿಶ್ರಾಂತಿಗೃಹವನ್ನು ಕಡುಬಡವನೇನಾದರೂ ಒಮ್ಮೆ ಒಳಹೊಕ್ಕು ನೋಡಿದರೆ ಅಲ್ಲಿನ ಐಷಾರಾಮಿ ಜೀವನವನ್ನು ನೋಡಿ ಆತ ಅಲ್ಲೇ ಎದೆ ಬಡಿದುಕೊಡು ಪ್ರಾಣ ನೀಗುವುದು ಖಚಿತ. ಇಂತಹ ವಿಶ್ರಾಂತಿ ಧಾಮಗಳಲ್ಲಿ ನಡೆಯುವ ಮುದುಕರ ಚಪಲಗಳು ನಿಜಕ್ಕೂ ಜನಸಾಮಾನ್ಯನನ್ನು ಲೇವಡಿ ಮಾಡಿದಂತೆಯೇ ಸರಿ.
ಇದು ಒಂದು ವ್ಯಕ್ತಿ, ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಎಲ್ಲ ಪಕ್ಷಗಳಲ್ಲೂ ಇಂತಹ ಬಿಳಿಯಾನೆ ರಾಜ್ಯಪಾಲರನ್ನು ಪೋಷಿಸುವ ಸಂಪ್ರದಾಯವಿದೆ. ನಾಚಿಕೆಯಾಗಬೇಕು ಇವರಿಗೆ... ಸಾಮಾನ್ಯ ಜನರ ಧಿಕ್ಕಾರವಿರಲಿ ಇಂತಹ ಬಿಳಿಯಾನೆಗಳಿಗೆ, ಅವರನ್ನು ಪೊರೆಯುವವರಿಗೆ ...












Click it and Unblock the Notifications