75ಕ್ಕೆ ಕಾಲಿಡುತ್ತಿರುವ ಹಂಸರಾಜ್ ಗೆ ಗುಲಾಬಿ ಹೂ

ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ವೈರಿಗಳಲ್ಲ. ಪರಿಸ್ಥಿತಿಗಳು, ಪಕ್ಷಗಳ ರೀತಿನೀತಿಗಳು ಅವರನ್ನು ಸೂತ್ರದ ಗೊಂಬೆಗಳಂತೆ ಆಟವಾಡಿಸುತ್ತವೆ. ರಾಜಕೀಯಕ್ಕೆ ಇಳಿದ ಮೇಲೆ ಇದೆಲ್ಲ ಇದ್ದದ್ದೆ. ರಾಜಕೀಯವನ್ನು ಬದಿಗಿಟ್ಟು ನೋಡಿದಾಗ ಎಲ್ಲವೂ ಸರಳವಾಗಿ ಕಾಣಿಸುತ್ತದೆ. ಹಾಗೆಯೆ, ಅವರಿಗೆ ಎಲ್ಲ ನಾಯಕರುಗಳಿಂದ ಶುಭಾಶಯಗಳು ಹರಿದುಬರುತ್ತಿವೆ. ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಕೂಡ ಅವರನ್ನು ದೆಹಲಿಯಿಂದಲೇ ಶುಭ ಹಾರೈಸಿದ್ದಾರೆ. [ಭಾರದ್ವಾಜ್ ರಂಥ ವ್ಯಕ್ತಿಯನ್ನು ಕಂಡೇ ಇಲ್ಲ!]
ಕಟ್ಟಾ ಕಾಂಗ್ರೆಸ್ ವಾದಿಯಾಗಿರುವ ಭಾರದ್ವಾಜ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ವಿಧೇಯ ಸೇವಕ. ಬೋಫೋರ್ಸ್ ಕೇಸಲ್ಲಿ ಆರೋಪಿ ಸ್ಥಾನದಲ್ಲಿದ್ದ ಕ್ವಟ್ರೋಚ್ಚಿ ಅವರ, ಸಿಬಿಐನಿಂದ ಫ್ರೀಜ್ ಮಾಡಲಾಗಿದ್ದ ಬ್ಯಾಂಕ್ ಖಾತೆಯನ್ನು ಡಿಫ್ರೀಜ್ ಮಾಡಿ ಸಿಬಿಐ ಕೆಂಗಣ್ಣಿಗೆ ಗುರಿಯಾಗಿದ್ದರು ಮತ್ತು ಗಾಂಧಿ ಕುಟುಂಬದಿಂದ ಶಭಾಸ್ ಗಿರಿ ಪಡೆದಿದ್ದರು. ರಾಜ್ಯಪಾಲರ ಹುದ್ದೆ ಎರಿದ ಮೇಲೂ ಅವರು ಕಟ್ಟಾ ಕಾಂಗ್ರೆಸ್ ಅಡಿಯಾಳಂತೆ ವರ್ತಿಸುತ್ತಾರೆ ಎನ್ನುವುದು ಅವರ ವಿರೋಧಿಗಳ ಆರೋಪ. ರಾಜೀವ್ ಗಾಂಧಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಅವರು ಯುಪಿಎ ಸರಕಾರದಲ್ಲಿಯೂ ಅದೇ ಪದವಿ ಆಕ್ರಮಿಸಿಕೊಂಡಿದ್ದರು.
1982ರಲ್ಲಿ ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಕಣಕ್ಕಿಳಿದ ಹಂಸರಾಜ್ ಅವರ ರಾಜಕೀಯ ನಡಿಗೆಗೆ ಬೋಫೋರ್ಸ್ ಸೇರಿದಂತೆ ಅನೇಕ ಎಡರುತೊಡರುಗಳು ಎದುರಾಗಿವೆ. ಜೂನ್ 25, 2009ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಂದಿನಿಂದ ಅವರು ಅಕ್ಷರಶಃ ಮುಳ್ಳಿನ ಕುರ್ಚಿಯ ಮೇಲೆ ಕುಳಿತೇ ರಾಜ್ಯಭಾರ ನಡೆಸಿದ್ದಾರೆ. ರೆಡ್ಡಿಗಳನ್ನು ಭ್ರಷ್ಟರೆಂದು ಕರೆದು ಅವರನ್ನು ಸಂಪುಟದಿಂದ ಕಿತ್ತುಹಾಕಬೇಕೆಂದು ಪಟ್ಟುಹಿಡಿದಿದ್ದರು. ಇನ್ನು ಅವರ ಮತ್ತು ಯಡಿಯೂರಪ್ಪ ನಡುವಿನ ಜಟಾಪಟಿ ಬಗ್ಗೆ ಬರೆದು ಬರ್ತಡೇ ಪಾರ್ಟಿಯ ಮೂಡನ್ನು ಹಾಳು ಮಾಡುವುದು ಬೇಡ.
ರಾಷ್ಟ್ರಪತಿ ಆಳ್ವಿಕೆಗೆ ಅವರು ಮಾಡಿರುವ ಶಿಫಾರಸನ್ನು ಎರಡನೇ ಬಾರಿ ತಳ್ಳಿಹಾಕಲು ಕೇಂದ್ರ ಸರಕಾರ ನಿರ್ಧರಿಸಿವೆ ಎಂಬ ಮಾತುಗಳು ಕೇಳಿಬಂದಿವೆ. ಅವರನ್ನು ಪ್ರತಿಷ್ಠಿತ ಸ್ಥಾನದಿಂದ ಕಿತ್ತುಹಾಕಬೇಕೆಂಬ ಚಳವಳಿಯನ್ನೂ ಬಿಜೆಪಿ ಆರಂಭಿಸಿದೆ. ಮುಂದೆ ಅವರು ಕರ್ನಾಟಕದಲ್ಲಿ ಇರುತ್ತಾರೋ ಬಿಡುತ್ತಾರೋ, ಅಂತೂ ಇಲ್ಲಿಯವರೆಗೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ನಿದ್ದೆಯನ್ನು ಸಾಕಷ್ಟು ಕೆಡಿಸಿರುವ ಅವರಿಗೆ ಮತ್ತೊಮ್ಮೆ ಶುಭಾಶಯ ಹೇಳೋಣ. ನೀವೂ ಕೂಡ ಹಿರಿಯ ನಾಗರಿಕ ಭಾರದ್ವಾಜ್ ಅವರಿಗೆ ಶುಭಾಶಯ ತಿಳಿಸಿ.












Click it and Unblock the Notifications