ಸೆಲ್ವಿ ಜಯಲಲಿತ ಪ್ರಮಾಣದೀಕ್ಷೆ ಸಮರ್ಪಯಾಮಿ

ಗಂಟೆ ಮದ್ಯಾಹ್ನ 12.45 ದಾಟುತ್ತಿದ್ದಂತೆ ಸೆಲ್ವಿ ಜಯಲಲಿತಾ ಮುಖ್ಯಮಂತ್ರಿಯಾಗಿ ಪ್ರಮಾಣ ದೀಕ್ಷೆ ಸ್ವೀಕಾರ ಆರಂಭಿಸಿದರು. ತಮಿಳು ನಾಡು ಜನತೆಗೆ ಸಂಭ್ರಮವೋ ಸಂಭ್ರಮ. ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನಿಟ್ರಾ ಕಳಗಂ (AIDMK) ಪಕ್ಷವನ್ನು ಗೆಲ್ಲಿಸಿದ ರಾಜ್ಯದ ಜನತೆಗೆ ಸಾರಥಿಯಾಗಿ ಮುನ್ನಡೆಯುವ ವಿಶ್ವಾಸ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಥೇಟ್ ಮದುವೆ ಮನೆಯಲ್ಲಿ ಕೇಳಿ ಬರುವ ಹಿನ್ನಲೆ ಸಂಗೀತವೂ ಅಲ್ಲಿತ್ತು.
ಸೆಲ್ವಿ(ಕುಮಾರಿ) ಜಯಲಲಿತರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ 33 ವಿಧಾನಸಭಾ ಸದಸ್ಯರಲ್ಲಿ 30 ಜನ ಹೊಸದಾಗಿ ಕ್ಯಾಬಿನೆಟ್ ಪ್ರವೇಶಿಸುತ್ತಿದ್ದಾರೆ. ಮೂವರು ಹಳಬರಲ್ಲಿ ಒಬ್ಬರು ಪನ್ನೀರ್ ಸೆಲ್ವಂ. ಇವರು ಈ ಮಂತ್ರಿಮಂಡಳದಲ್ಲಿರುವ ಎರಡನೇ ಪ್ರಭಾವಿ ವ್ಯಕ್ತಿ. ಮೊದಲನೆಯ ಪ್ರಭಾವಿ ಯಾರು ಅಂತ ಕೇಳದಿರಿ. ಕುಮಾರಿ ಜಯಲಲಿತ ಮುನಿಸಿಕೊಂಡಾರು. ಅಂದಹಾಗೆ, ಜಯಲಲಿತಾ ಕರುಣಾನಿಧಿಯವರಂತೆ ಚಾರುವಾಕ ವಂಶದವರಲ್ಲ. ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಮೂರನೇ ಬಾರಿ ತಮಿಳು ನಾಡಿನ ಚುಕ್ಕಾಣಿ ಹಿಡಿದ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಯಾರು ಬಂದಿದ್ರು ಅಂತ ನೋಡಿದರೆ ತುಸು ಅಚ್ಚರಿಯಾದೀತು. ಅಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯಿಡುಗಾರು, ಸಿಪಿಐ ಪ್ರಧಾನ ಕಾರ್ಯದರ್ಶಿ ಎ. ಬಿ. ಬೃಂದನ್ ಇದ್ರು. ಮುಖ್ಯವಾಗಿ ಹಿರಿಯ ಪತ್ರಕರ್ತ ಚೋ. ರಾಮಸ್ವಾಮಿನೂ ಇದ್ರು.
ಒಂದು ವಿಷಯ ಹೇಳಲು ಮರೆತೆ. ಚುನಾವಣೆಗೆ ಮುನ್ನ ಕರುಣಾನಿಧಿ ಸುಮಾರು 750 ಕೋಟಿ ರೂ. ವ್ಯಯ ಮಾಡಿ ಕಟ್ಟಿದ ಹೊಸ ವಿಧಾನಸೌಧ ಸೆಲ್ವಿಗೆ ಬೇಡವಂತೆ. ರಾಜ್ಯದ ಜನರ ಸೇವೆ ಮಾಡಲು ನನಗ್ಯಾಕೆ ಹೊಸ ಅರಮನೆ ಅಂತ ಹಳೆಯ ಸೌಧದಲ್ಲಿಯೇ ಆಡಳಿತ ನಡೆಸುತ್ತಾರೆ. ಮೊನ್ನೆ ಚುನಾವಣೆಯಲ್ಲಿ ಗೆದ್ದರಲ್ವ. ಈ ಮೂರು ದಿನಗಳಲ್ಲಿ ಹಳೆಯ ಸೌಧಕ್ಕೆ ಸುಮಾರು 50 ಕೋಟಿ ರೂ. ಖರ್ಚು ಮಾಡಿ ಅದನ್ನೇ ನವೀಕರಣ ಮಾಡಿ ಬಿಟ್ರು. ಇನ್ನು ನನ್ನ ರಾಜ್ಯಭಾರ ಇಲ್ಲೇ ಅಂತ ನಿರ್ಧರಿಸಿಬಿಟ್ರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅತಿಥಿಗಳೆಲ್ಲ ನಿರ್ಗಮಿಸಿದ್ರು. ಈ ಸಂಭ್ರಮದ ಕಾರ್ಯಕ್ರಮದ ಕುರಿತು ಎಲ್ಲರ ಮಂದಹಾಸವೇ ಯಶಸ್ವಿಯನ್ನು ಸಾರಿ ಹೇಳುತ್ತಿತ್ತು. ನರೇಂದ್ರ ಮೋದಿಯಂತು ಟ್ವಿಟ್ಟರ್ ನಲ್ಲಿ "ಪ್ರಮಾಣ ವಚನ ಕಾರ್ಯಕ್ರಮ ಅದ್ದೂರಿಯಾಗಿತ್ತು" ಅಂತ ಮನಸಾರೆ ಹೊಗಳಿದ್ದಾರೆ. ಜೊತೆಗೆ ರಜನಿಕಾಂತ್ ಅವರ ಆರೋಗ್ಯ ಚೆನ್ನಾಗಿರಲೆಂದು ಶುಭಹಾರೈಸಲು ಸೂಪರ್ ಸ್ಟಾರ್ ಬಳಿ ಹೋಗುತ್ತಿದ್ದೇನೆ" ಎಂದು ಟ್ವಿಟ್ ಮಾಡಿದ್ದಾರೆ. ಸೆಲ್ವಿ ಆಡಳಿತ ಆರಂಭವಾಗಿದೆ. ಶುಭವಾಗಲಿ. ಡಿಎಂಕೆ ದುರಾಡಳಿತಕ್ಕೆ ಕೊಡಲಿ ಏಟು ಬಿದ್ದಿದೆ. ಹಾಗಂತ ಎಡಿಎಂಕೆ ಏನೂ ಸತ್ಯಹರಿಶ್ಚಂದ್ರನ ಸಂತಾನವಲ್ಲ. ಹಿಂದೆ ಆಡಳಿತದಲ್ಲಿದ್ದಾಗ ಅವರ ಎಸಗಿದ ಆಟೋಟೋಪಗಳನ್ನು ಮರೆವುವಂತಿಲ್ಲ.
ನೀವೂ ಏನೇ ಅನ್ನಿ. 2G ಹಗರಣದಲ್ಲಿ ಸಿಲುಕಿ ಜಾಮೀನು ಸಿಗದೆ ನರಳುತ್ತಿರುವ ಕರುಣಾನಿಧಿ ಅವರ ಮಗಳು ಕನಿಮೊಳಿಗಿಂತ ಅರುವತ್ತರ ಮೇಲೆ ಮೂರು ವರ್ಷ ತುಂಬಿರೋ ಮುದ್ದುಮಣಿ ಜಯಾನೇ ವಾಸಿ.












Click it and Unblock the Notifications